ಇಂದಿನಿಂದ ಹೈದರಾಬಾದ್‌ನಲ್ಲಿ ಪ್ರೊ ಕಬಡ್ಡಿ ಲೀಗ್‌: ಈ ವರ್ಷ ಬೆಂಗಳೂರಲ್ಲಿಲ್ಲ ಪಂದ್ಯ

| Published : Oct 18 2024, 12:05 AM IST / Updated: Oct 18 2024, 04:21 AM IST

ಇಂದಿನಿಂದ ಹೈದರಾಬಾದ್‌ನಲ್ಲಿ ಪ್ರೊ ಕಬಡ್ಡಿ ಲೀಗ್‌: ಈ ವರ್ಷ ಬೆಂಗಳೂರಲ್ಲಿಲ್ಲ ಪಂದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹೈದರಾಬಾದ್‌ನಲ್ಲಿಂದು 11ನೇ ಆವೃತ್ತಿ ಟೂರ್ನಿ ಉದ್ಘಾಟನೆ. ಒಟ್ಟು 3 ನಗರಗಳ ಆತಿಥ್ಯ. ಉದ್ಘಾಟನಾ ಪಂದ್ಯದಲ್ಲೇ ಬೆಂಗ್ಳೂರು ಬುಲ್ಸ್‌ ಕಣಕ್ಕೆ. ತೆಲುಗು ಟೈಟಾನ್ಸ್‌ ವಿರುದ್ಧ ಸೆಣಸು

ಹೈದರಾಬಾದ್‌: ಬಹುನಿರೀಕ್ಷಿತ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ ಶುಕ್ರವಾರ ಹೈದರಾಬಾದ್‌ನಲ್ಲಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲೇ ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡ ಕಣಕ್ಕಿಳಿಯಲಿದ್ದು, ತೆಲುಗು ಟೈಟಾನ್ಸ್‌ ಸವಾಲು ಎದುರಾಗಲಿದೆ.

 ದಿನದ 2ನೇ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ತಂಡ ಯು ಮುಂಬಾ ವಿರುದ್ಧ ಸೆಣಸಾಡಲಿದೆ.ಈ ಬಾರಿ ಟೂರ್ನಿಗೆ ಒಟ್ಟು 3 ನಗರಗಳು ಆತಿಥ್ಯ ವಹಿಸಲಿವೆ. ಮೊದಲ ಚರಣದ ಪಂದ್ಯಗಳು ಹೈದರಾಬಾದ್‌ನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ಆಯೋಜನೆಗೊಳ್ಳಲಿವೆ. 

ಲೀಗ್‌ ಹಂತದ ಪಂದ್ಯಗಳು ಡಿ.24ರ ವರೆಗೂ ನಡೆಯಲಿದ್ದು, ಒಟ್ಟು 132 ಪಂದ್ಯಗಳು ನಡೆಯಲಿವೆ. ಟೂರ್ನಿಯ ಪ್ಲೇ-ಆಫ್‌ ಪಂದ್ಯಗಳ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.ಟೂರ್ನಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಳ್ಳಲಿದ್ದು, ಲೀಗ್‌ ಹಂತದಲ್ಲಿ ತಲಾ 2 ಬಾರಿ ಪರಸ್ಪರ ಸೆಣಸಾಡಲಿವೆ. ಲೀಗ್‌ ಹಂತ ಮುಕ್ತಾಯದ ಬಳಿಕ ಅಗ್ರ-6 ತಂಡಗಳು ಪ್ಲೇ-ಆಫ್‌ ಪ್ರವೇಶಿಸಲಿವೆ. ಪ್ರತಿ ದಿನವೂ 2 ಪಂದ್ಯಗಳು ಆಯೋಜನೆಗೊಳ್ಳಲಿದ್ದು, ಮೊದಲ ಪಂದ್ಯ ರಾತ್ರಿ 8 ಗಂಟೆಗೆ, 2ನೇ ಪಂದ್ಯ ರಾತ್ರಿ 9 ಗಂಟೆಗೆ ಶುರುವಾಗಲಿದೆ.

3 ನಗರದಲ್ಲಿ ಪ್ರೊ ಕಬಡ್ಡಿ ಹವಾ: ಬೆಂಗಳೂರಿನಲ್ಲಿಲ್ಲ

ಟೂರ್ನಿ ಈ ಬಾರಿ 3 ನಗರಗಳ ಕ್ಯಾರವಾನ್‌ ಮಾದರಿಯಲ್ಲಿ ಹೈದರಾಬಾದ್‌, ನೋಯ್ಡಾ ಹಾಗೂ ಪುಣೆಯಲ್ಲಿ ನಡೆಯಲಿವೆ. ಅ.18ರಿಂದ ನ.9ರ ವರೆಗೆ ಹೈದರಾಬಾದ್‌ನಲ್ಲಿ ಪಂದ್ಯಗಳು ನಡೆಯಲಿವೆ. 

ಬಳಿಕ ನ.10ರಿಂದ ಡಿ.1ರ ವರೆಗೆ ನೋಯ್ಡಾ ಹಾಗೂ ಡಿ.3ರಿಂದ 24ರ ವರೆಗೆ ಪುಣೆಯಲ್ಲಿ ಆಯೋಜನೆಗೊಳ್ಳಲಿವೆ. ಈ ಹಿಂದಿನ ಬಹುತೇಕ ಎಲ್ಲಾ ಆವೃತ್ತಿಗಳಲ್ಲೂ ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ ಪಂದ್ಯಗಳು ನಡೆಯುತ್ತಿದ್ದರು. 2021ರಲ್ಲಿ ಸಂಪೂರ್ಣ ಲೀಗ್ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜನೆಗೊಂಡಿತ್ತು. ಕಳೆದೆರಡು ಆವೃತ್ತಿಗಳಲ್ಲೂ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದಿದ್ದವು. ಆದರೆ ಈ ಬಾರಿ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುವುದಿಲ್ಲ.

12 ತಂಡಗಳು: ಈ ಬಾರಿ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಳ್ಳಲಿವೆ.

22 ಪಂದ್ಯಗಳು: ಪ್ರತಿ ತಂಡ ಲೀಗ್‌ ಹಂತದಲ್ಲಿ 22 ಪಂದ್ಯಗಳನ್ನಾಡಲಿವೆ.ಎಲ್ಲಾ ಪಂದ್ಯಗಳು ಸ್ಟಾರ್‌ಸ್ಪೋರ್ಟ್ಸ್‌ ಚಾನೆಲ್‌ ಹಾಗೂ ಡಿಸ್ನಿ+ಹಾಟ್‌ಸ್ಟಾರ್‌ ಆ್ಯಪ್‌ನಲ್ಲಿ ನೇರ ಪ್ರಸಾರಗೊಳ್ಳಲಿವೆ.