ಸಾರಾಂಶ
ಹೈದರಾಬಾದ್: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ 3 ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಹಾಗೂ ಹರ್ಯಾಣ ಸ್ಟೀಲರ್ಸ್ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.ಸೋಮವಾರ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧ ಪಾಟ್ನಾ 37-35 ಅಂಕಗಳಿಂದ ರೋಚಕ ಗೆಲುವು ಸಾಧಿಸಿತು.
ಆರಂಭದಲ್ಲೇ ತೀವ್ರ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಡೆಲ್ಲಿ ಮೊದಲಾರ್ಧಕ್ಕೆ 20-19ರಿಂದ ಮುನ್ನಡೆಯಲ್ಲಿತ್ತು. ಆದರೆ ಕೊನೆ ಹಂತದಲ್ಲಿ ಮಿಂಚಿನ ಆಟವಾಡಿದ ಪಾಟ್ನಾ 2 ಅಂಕಗಳ ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಡೆಲ್ಲಿಯ ಆಶು ಮಲಿಕ್ 19 ಅಂಕಗಳ ಹೋರಾಟ ವ್ಯರ್ಥವಾಯಿತು. ಪಾಟ್ನಾದ ಸಚಿನ್ 9 ಅಂಕ ಗಳಿಸಿದರು.
ಗುಜರಾತ್ ಔಟ್: 2ನೇ ಎಲಿಮಿನೇಟರ್ ಪಂದ್ಯದಲ್ಲಿ ಹರ್ಯಾಣಕ್ಕೆ ಗುಜರಾತ್ ವಿರುದ್ಧ 42-25 ಅಂಕಗಳ ಗೆಲುವು ಲಭಿಸಿತು. ಆರಂಭದ ಕೆಲ ನಿಮಿಷ ಇತ್ತಂಡಗಳಿಂದ ಸಮಬಲದ ಹೋರಾಟ ಕಂಡುಬಂದರೂ, ಬಳಿಕ ಹರ್ಯಾಣ ಸತತ ಅಂಕ ಗಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಹರ್ಯಾಣದ ವಿನಯ್ 12 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ನಾಳೆ ಪುಣೆ vs ಪಾಟ್ನಾ, ಜೈಪುರ vs ಹರ್‍ಯಾಣ ಸೆಮಿ
ಸೆಮಿಫೈನಲ್ ಪಂದ್ಯಗಳು ಬುಧವಾರ ನಡೆಯಲಿವೆ. ಗುಂಪು ಹಂತದಲ್ಲಿ ಅಗ್ರಸ್ಥಾನಿಯಾಗಿ ನೇರವಾಗಿ ಸೆಮೀಸ್‌ಗೇರಿದ್ದ ಪುಣೇರಿ ಪಲ್ಟನ್ ತಂಡ ಪಾಟ್ನಾ ವಿರುದ್ಧ ಸೆಣಸಾಡಲಿದೆ.
ಗುಂಪಿನಲ್ಲಿ 2ನೇ ಸ್ಥಾನ ಪಡೆದಿದ್ದ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಅಂತಿಮ 4ರ ಘಟ್ಟದಲ್ಲಿ ಹರ್ಯಾಣ ಸವಾಲು ಎದುರಾಗಲಿದೆ.