ಪ್ರೊ ಕಬಡ್ಡಿ : ಬೆಂಗ್ಳೂರು ಬುಲ್ಸ್‌ಗೆ ಪುಣೇರಿ ಪಲ್ಟನ್‌ ವಿರುದ್ಧ ಹೀನಾಯ ಹಿನ್ನಡೆ - ಸತತ 4ನೇ ಸೋಲು!

| Published : Oct 26 2024, 01:07 AM IST / Updated: Oct 26 2024, 04:57 AM IST

ಪ್ರೊ ಕಬಡ್ಡಿ : ಬೆಂಗ್ಳೂರು ಬುಲ್ಸ್‌ಗೆ ಪುಣೇರಿ ಪಲ್ಟನ್‌ ವಿರುದ್ಧ ಹೀನಾಯ ಹಿನ್ನಡೆ - ಸತತ 4ನೇ ಸೋಲು!
Share this Article
  • FB
  • TW
  • Linkdin
  • Email

ಸಾರಾಂಶ

ಪುಣೇರಿ ಪಲ್ಟನ್‌ ವಿರುದ್ಧ ಹೀನಾಯ ಸೋಲು. ನಿರಾಸೆ ಮೂಡಿಸಿದ ಪ್ರದೀಪ್‌ ನರ್ವಾಲ್‌. ಅಂಕಪಟ್ಟಿಯಲ್ಲಿ ಮೇಲೇಳದ ಬೆಂಗಳೂರು ಗೂಳಿಗಳು.

ಹೈದರಾಬಾದ್‌: 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್‌ ಮೊದಲ ಗೆಲುವಿಗೆ ಮತ್ತಷ್ಟು ಸಮಯ ಕಾಯಬೇಕಿದೆ. ಶುಕ್ರವಾರ ತಂಡಕ್ಕೆ ಸತತ 4ನೇ ಸೋಲು ಎದುರಾಯಿತು. ಹಾಲಿ ಚಾಂಪಿಯನ್‌ ಪುಣೇರಿ ಪಲ್ಟನ್‌ ವಿರುದ್ಧ ನಡೆದ ಪಂದ್ಯದಲ್ಲಿ ಬುಲ್ಸ್‌ 22-36 ಅಂಕಗಳ ಅಂತರದಲ್ಲಿ ಸೋಲಿಗೆ ಶರಣಾಯಿತು.

ಮೊದಲಾರ್ಧದಲ್ಲೇ ಬುಲ್ಸ್‌ ನೀರಸ ಪ್ರದರ್ಶನ ತೋರಿ ಹಿನ್ನಡೆ ಅನುಭವಿಸಿತು. ನಾಯಕ ಹಾಗೂ ತಾರಾ ರೈಡರ್ ಪ್ರದೀಪ್‌ ನರ್ವಾಲ್‌ ಮೊದಲ 20 ನಿಮಿಷಗಳಲ್ಲಿ ಕೇವಲ 3 ರೈಡ್‌ ನಡೆಸಿ, ಒಂದೂ ಅಂಕ ಗಳಿಸದೆ ನಿರಾಸೆ ಮೂಡಿಸಿದರು. ಬಳಿಕ ತಂಡದ ಕೋಚ್‌ ಅವರನ್ನು ಅಂಕಣದಿಂದ ಹೊರಗಿಟ್ಟರು. ಮೊದಲಾರ್ಧದಲ್ಲಿ ಒಮ್ಮೆ ಆಲೌಟ್‌ ಆಗಿ 11-18ರ ಹಿನ್ನಡೆ ಅನುಭವಿಸಿದ್ದ ಬುಲ್ಸ್‌, ದ್ವಿತೀಯಾರ್ಧದಲ್ಲಿ ತಕ್ಕಮಟ್ಟಿಗೆ ಹೋರಾಟ ಪ್ರದರ್ಶಿಸಿದರು, ಪುಣೇರಿಯ ಅಬ್ಬರಕ್ಕೆ ತಡೆಯೊಡ್ಡಲು ಸಾಧ್ಯವಾಗಲಿಲ್ಲ. ಸೋಲಿನ ಅಂತರವನ್ನು 7 ಅಂಕಗಳೊಳಗೆ ಇಳಿಸಿ ಕನಿಷ್ಠ 1 ಅಂಕ ಗಳಿಸುವ ಬುಲ್ಸ್‌ ಪ್ರಯತ್ನವೂ ಫಲ ನೀಡಲಿಲ್ಲ. ಪುಣೇರಿ 4 ಪಂದ್ಯಗಳಲ್ಲಿ 3ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

ಇದೇ ವೇಳೆ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ವಿರುದ್ಧ ಪಾಟ್ನಾ ಪೈರೇಟ್ಸ್‌ 42-40 ಅಂಕಗಳ ರೋಚಕ ಗೆಲುವು ಸಾಧಿಸಿತು. ಯುವ ರೈಡರ್ ದೇವಾಂಕ್‌ 25 ಅಂಕ ಕಬಳಿಸಿ, ಪಾಟ್ನಾಕ್ಕೆ ಮೊದಲ ಗೆಲುವು ತಂದುಕೊಟ್ಟರು.