ಸಾರಾಂಶ
ಮುಂಬೈ: 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ಗುರುವಾರ ಹಾಗೂ ಶುಕ್ರವಾರ ಮುಂಬೈನಲ್ಲಿ ನಡೆಯಲಿದೆ. ಹರಾಜಿಗೂ ಮೊದಲೇ ಎಲ್ಲಾ 12 ತಂಡಗಳು ಸೇರಿ ಒಟ್ಟು 22 ಆಟಗಾರರನ್ನು ಉಳಿಸಿಕೊಂಡಿದ್ದವು. ಇದೀಗ ಉಳಿದ ಆಟಗಾರರನ್ನು ಖರೀದಿಸಲು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿವೆ.
ಪ್ರತಿ ತಂಡವು ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರನ್ನು ಖರೀದಿಸಬಹುದಾಗಿದ್ದು, ಸದ್ಯ ರೀಟೈನ್ ಆಗಿರುವ 88 ಆಟಗಾರರನ್ನು ಬಿಟ್ಟು ಇನ್ನೂ ಗರಿಷ್ಠ 212 ಆಟಗಾರರಿಗೆ ಅವಕಾಶವಿದೆ. ಈ ಸ್ಥಾನಗಳಿಗೆ 500ಕ್ಕೂ ಹೆಚ್ಚು ಆಟಗಾರರು ಪೈಪೋಟಿಯಲ್ಲಿದ್ದಾರೆ.
ಆಟಗಾರರ ಖರೀದಿಗೆ ಪ್ರತಿ ತಂಡ ಒಟ್ಟು 5 ಕೋಟಿ ರು. ಬಳಸಬಹುದಾಗಿದೆ. ರೀಟೈನ್ ಮಾಡಿಕೊಂಡಿರುವ ಆಟಗಾರರಿಗೆ ನೀಡುವ ಸಂಭಾವನೆಯೂ ಇದರಲ್ಲಿ ಸೇರಿರಲಿದೆ.
ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರನ್ನು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ‘ಎ’ ವಿಭಾಗದಲ್ಲಿರುವ ಆಟಗಾರರ ಮೂಲಬೆಲೆ ₹30 ಲಕ್ಷ ಇದ್ದು, ‘ಬಿ’ ವಿಭಾಗದಲ್ಲಿರುವ ಆಟಗಾರರು ₹20 ಲಕ್ಷ, ‘ಸಿ’ ವಿಭಾಗದಲ್ಲಿರುವ ಆಟಗಾರರು ₹13 ಲಕ್ಷ ಹಾಗೂ ‘ಡಿ’ ವಿಭಾಗದಲ್ಲಿರುವ ಆಟಗಾರರು ₹9 ಲಕ್ಷ ಮೂಲಬೆಲೆ ಹೊಂದಿದ್ದಾರೆ. ಪವನ್, ಭರತ್ ಆಕರ್ಷಣೆ
ಕಳೆದೆರೆಡು ಆವೃತ್ತಿಗಳ ಪ್ರೊ ಕಬಡ್ಡಿಯಲ್ಲಿ ₹2 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗಿ, ಲೀಗ್‌ನ ಅತ್ಯಂತ ದುಬಾರಿ ಆಟಗಾರ ಎನಿಸಿದ್ದ ಪವನ್ ಶೆರಾವತ್, ಬೆಂಗಳೂರು ಬುಲ್ಸ್ ತಂಡದಲ್ಲಿ ಮಿಂಚಿದ್ದ ಭರತ್ ಹೂಡಾ, ಲೀಗ್‌ನ ಸಾರ್ವಕಾಲಿಕ ಶ್ರೇಷ್ಠ ರೈಡರ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಪ್ರದೀಪ್ ನರ್ವಾಲ್, ಮಣೀಂದರ್ ಸಿಂಗ್ ಸೇರಿ ಹಲವು ತಾರಾ ಆಟಗಾರರು ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.