ಪ್ರೊ ಲೀಗ್‌ ಹಾಕಿ: ಭಾರತ ಮಹಿಳೆಯರಿಗೆ ಕೊನೆಗೂ ಗೆಲುವಿನ ಸಿಹಿ

| Published : Feb 10 2024, 01:47 AM IST

ಪ್ರೊ ಲೀಗ್‌ ಹಾಕಿ: ಭಾರತ ಮಹಿಳೆಯರಿಗೆ ಕೊನೆಗೂ ಗೆಲುವಿನ ಸಿಹಿ
Share this Article
  • FB
  • TW
  • Linkdin
  • Email

ಸಾರಾಂಶ

2023-24ರ ಮಹಿಳಾ ಪ್ರೊ ಲೀಗ್‌ ಹಾಕಿಯಲ್ಲಿ ಭಾರತ ಮಹಿಳಾ ತಂಡ ಕೊನೆಗೂ ಮೊದಲ ಗೆಲುವಿನ ಸಿಹಿ ಅನುಭವಿಸಿದೆ. ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟಿದ್ದ ಭಾರತೀಯರಲ್ಲಿ ತಡವಾಗಿಯಾದರೂ ಆತ್ಮವಿಶ್ವಾಸದ ಚಿಗುರೊಡೆದಿದೆ.

ಭುವನೇಶ್ವರ: 2023-24ರ ಮಹಿಳಾ ಪ್ರೊ ಲೀಗ್‌ ಹಾಕಿಯಲ್ಲಿ ಭಾರತ ಮಹಿಳಾ ತಂಡ ಕೊನೆಗೂ ಮೊದಲ ಗೆಲುವಿನ ಸಿಹಿ ಅನುಭವಿಸಿದೆ. ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟಿದ್ದ ಭಾರತೀಯರಲ್ಲಿ ತಡವಾಗಿಯಾದರೂ ಆತ್ಮವಿಶ್ವಾಸದ ಚಿಗುರೊಡೆದಿದೆ.

ಶುಕ್ರವಾರ ಅಮೆರಿಕ ವಿರುದ್ಧ ನಡೆದ ಪಂದ್ಯದಲ್ಲಿ ಭಾರತಕ್ಕೆ 3-1 ಗೋಲಿನಿಂದ ಗೆಲುವು ಲಭಿಸಿತು. ಭಾರತದ ಪರ ವಂದನಾ ಕಟಾರಿಯಾ, ದೀಪಿಕಾ ಹಾಗೂ ಸಲೀಮಾ ಟೆಟೆ ತಲಾ ಒಂದೊಂದು ಗೋಲು ಬಾರಿಸಿದರು. ಸದ್ಯ ಭಾರತ ತಂಡ 4 ಪಂದ್ಯಗಳಲ್ಲಿ 3 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.

ಆರಂಭಿಕ 3 ಪಂದ್ಯಗಳಲ್ಲಿ ಭಾರತ ತಂಡ ಚೀನಾ, ನೆದರ್‌ಲೆಂಡ್ಸ್‌ ಹಾಗೂ ಅರ್ಜೆಂಟೀನಾ ವಿರುದ್ಧ ಸೋಲನುಭವಿಸಿದ್ದವು. ಮುಂದಿನ ಪಂದ್ಯದಲ್ಲಿ ಫೆ.12ರಂದು ಚೀನಾ ವಿರುದ್ಧ ಸೆಣಸಾಡಲಿದೆ.

ಪುರುಷರಿಗೆ ಶುಭಾರಂಭ ನಿರೀಕ್ಷೆ

ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಭಾರತ ಪುರುಷರ ತಂಡ ಶುಭಾರಂಭದ ನಿರೀಕ್ಷೆಯಲ್ಲಿದೆ. ಶನಿವಾರ ಮೊದಲ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ ಕಣಕ್ಕಿಳಿಯಲಿದೆ.

ಪ್ರಸಕ್ತ ಆವೃತ್ತಿಯಲ್ಲಿ ಸ್ಪೇನ್‌ ಮತ್ತು ಭಾರತ ತಂಡಗಳಿಗೆ ಇದು ಮೊದಲ ಪಂದ್ಯ. ಭಾರತ ಹಿಂದಿನ 3 ಅವೃತ್ತಿಗಳಲ್ಲಿ ಕ್ರಮವಾಗಿ 5, 3, 4ನೇ ಸ್ಥಾನದಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿತ್ತು. ಈ ಬಾರಿ ಚೊಚ್ಚಲ ಪ್ರೊ ಲೀಗ್‌ ಹಾಕಿ ಕಿರೀಟ ಗೆಲ್ಲುವ ನಿರೀಕ್ಷೆಯಲ್ಲಿದ್ದು, ಸುಧಾರಿತ ಪ್ರದರ್ಶನ ನೀಡಬೇಕಾದ ಅಗತ್ಯವಿದೆ.

ಸದ್ಯ ಹಾಲಿ ಚಾಂಪಿಯನ್‌ ನೆದರ್‌ಲೆಂಡ್ಸ್‌ 4 ಪಂದ್ಯಗಳನ್ನಾಡಿ 2ರಲ್ಲಿ ಜಯಗಳಿಸಿದ್ದು, ಒಂದರಲ್ಲಿ ಸೋಲು ಮತ್ತು ಒಂದರಲ್ಲಿ ಡ್ರಾ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅರ್ಜೆಂಟಿನಾ ಮತ್ತು ಇಂಗ್ಲೆಂಡ್‌ ನಂತರದ ಸ್ಥಾನಗಳಲ್ಲಿವೆ.

ವರುಣ್‌ ಮೇಲಿನ ಆರೋಪದಿಂದತಂಡ ವಿಚಲಿತ: ಕೋಚ್‌ ಫುಲ್ಟನ್‌ಭುವನೇಶ್ವರ್‌: ವರುಣ್‌ ಕುಮಾರ್‌ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಿಂದ ಭಾರತ ಹಾಕಿ ತಂಡ ವಿಚಲಿತವಾಗಿದೆ ಎಂದು ಮುಖ್ಯ ಕೋಚ್‌ ಕ್ರಿಗ್‌ ಫುಲ್ಟನ್‌ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ತಂಡಕ್ಕಿದು ಸವಾಲಿನ ಪರಿಸ್ಥಿತಿ. ಪ್ರೊ ಲೀಗ್‌ನಲ್ಲಿ ಅವರ ಅನುಪಸ್ಥಿತಿಯನ್ನು ಗಾಯದ ಸಮಸ್ಯೆ ಎಂಬಂತೆ ಪರಿಗಣಿಸಲಾಗುವುದು. ಅವರನ್ನು ಹೊರತುಪಡಿಸಿ ತಂಡ ಯೋಜನೆ ರೂಪಿಸಲಿದೆ ಎಂದು ಹೇಳಿದ್ದಾರೆ. ವರುಣ್‌ ಕುಮಾರ್‌ ಮೇಲೆ ಪೋಕ್ಸೊ ಪ್ರಕರಣ ದಾಖಲಾದ ಹಿನ್ನೆಲೆ ಎಫ್‌ಐಎಚ್‌ ಪ್ರೊ ಲೀಗ್‌ ನಿಂದ ಹಿಂದೆ ಸರಿದಿರುವ ಅವರು, ಕಾನೂನು ಸಮರ ನಡೆಸುವುದಾಗಿ ತಿಳಿಸಿದ್ದರು.