ಸಾರಾಂಶ
ಕನ್ನಡಪ್ರಭ ವಾರ್ತೆ ಹೈದರಾಬಾದ್
3 ತಿಂಗಳ ಕಾಲ ಕಬಡ್ಡಿ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿ, ರೋಚಕತೆಯ ಭರಪೂರ ರಸದೌತಣ ಉಣಬಡಿಸಿದ್ದ 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ನಿರ್ಣಾಯಕ ಹಂತ ತಲುಪಿದೆ.
ಈ ಆವೃತ್ತಿಯ ಲೀಗ್‌ನ ಫೈನಲ್ ಪಂದ್ಯ ಶುಕ್ರವಾರ ಗಚ್ಚಿಬೌಲಿಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಚೊಚ್ಚಲ ಪ್ರಶಸ್ತಿಗಾಗಿ ಪುಣೇರಿ ಪಲ್ಟನ್ ಹಾಗೂ ಹರ್ಯಾಣ ಸ್ಟೀಲರ್ಸ್ ಪರಸ್ಪರ ಸೆಣಸಾಡಲಿವೆ.
ಅಸ್ಲಂ ಇನಾಮ್ದಾರ್ ನಾಯಕತ್ವದ ಪುಣೇರಿ ಕಳೆದ ಆವೃತ್ತಿಯಂತೆ ಈ ಬಾರಿಯೂ ಆಕ್ರಮಣಕಾರಿ ಪ್ರದರ್ಶನ ನೀಡಿ ಫೈನಲ್‌ವರೆಗೂ ತಲುಪಿದೆ. ಗುಂಪಿನಲ್ಲಿ ಅಗ್ರಸ್ಥಾನಿಯಾಗಿದ್ದ ತಂಡ ಸೆಮಿಫೈನಲ್‌ನಲ್ಲೂ ಪರಾಕ್ರಮ ಮೆರೆದು, 3 ಬಾರಿ ಚಾಂಪಿಯನ್ ಪಾಟ್ನಾ ವಿರುದ್ಧ ಜಯಭೇರಿ ಬಾರಿಸಿದೆ. ಅಸ್ಲಂ ಜೊತೆಗೆ ಮೋಹಿತ್, ಪಂಕಜ್ ರೈಡಿಂಗ್ ಆಧಾರಸ್ತಂಭಗಳಾಗಿದ್ದು, ಎಷ್ಟೇ ಬಲಿಷ್ಠ ರಕ್ಷಣಾಪಡೆಯನ್ನೂ ಹಿಮ್ಮೆಟ್ಟಿಸಬಲ್ಲ ಸಾಮರ್ಥ ಹೊಂದಿದ್ದಾರೆ.
ಇರಾನ್‌ನ ಮೊಹಮದ್‌ರೆಜಾ ಶಾದ್ಲೂ ತಮ್ಮ ಬಲಿಷ್ಠ ಬಾಹುಗಳ ಮೂಲಕ ಎದುರಾಳಿ ರೈಡರ್‌ಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, 23 ಪಂದ್ಯಗಳಲ್ಲಿ 97 ಟ್ಯಾಕಲ್ ಅಂಕ ಸಂಪಾದಿಸಿದ್ದಾರೆ.
ಅವರ ಪ್ರದರ್ಶನವೇ ಸೋಲು-ಗೆಲುವು ನಿರ್ಧರಿಸುವಂತಿದೆ.ಮತ್ತೊಂದೆಡೆ ದೊಡ್ಡ ಖ್ಯಾತಿ, ಹೆಚ್ಚು ಹೆಸರುಗಳಿಸಿದ ಆಟಗಾರರು ಇಲ್ಲದ ಹೊರತಾಗಿಯೂ ಸದ್ದು ಗದ್ದಲವಿಲ್ಲದೇ ಹರ್ಯಾಣ ಫೈನಲ್ ತಲುಪಿದೆ.
ಗುಂಪು ಹಂತದಲ್ಲಿ 4ನೇ ಸ್ಥಾನಿಯಾಗಿದ್ದ ಜೈದೀಪ್ ದಹಿಯಾ ನಾಯಕತ್ವದ ತಂಡ ಎಲಿಮಿನೇಟರ್‌ನಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಗೆದ್ದು, ಬಳಿಕ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಜೈಪುರ ವಿರುದ್ಧ ಜಯಭೇರಿ ಬಾರಿಸಿತು.
ನವೀನ್, ಶಿವಂ ಪ್ರಮುಖ ರೈಡರ್‌ಗಳು. ಡಿಫೆಂಡರ್‌ಗಳಾದ ಜೈದೀಪ್, ಮೋಹಿತ್, ರಾಹುಲ್ ಮೇಲೆ ತಂಡ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ.
ಕನ್ನಡಿಗ ಕೋಚ್ ರಮೇಶ್‌ಗೆ 3ನೇ ಟ್ರೋಫಿ ಗೆಲ್ಲುವ ಗುರಿ
ಪ್ರೊ ಕಬಡ್ಡಿಯ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರಾಗಿರುವ ಕನ್ನಡಿಗ ಬಿ.ಸಿ.ರಮೇಶ್ ಸದ್ಯ ಪುಣೇರಿ ತಂಡದ ಪ್ರಧಾನ ಕೋಚ್. ಕಳೆದ ವರ್ಷ ಪುಣೆ ಫೈನಲ್‌ಗೇರಿದಾಗಲೂ ಅವರೇ ಕೋಚ್ ಆಗಿದ್ದರು.
ಒಟ್ಟಾರೆ ಇದು ಅವರಿಗೆ 4ನೇ ಫೈನಲ್. ಈ ಮೊದಲು ಇವರ ಅವಧಿಯಲ್ಲೇ ಬೆಂಗಳೂರು ಬುಲ್ಸ್(2018), ಬೆಂಗಾಲ್ ವಾರಿಯರ್ಸ್(2019) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದವು. --ತಪ್ಪು ಮರುಕಳಿಸಲ್ಲಕಳೆದ ವರ್ಷ ಫೈನಲ್‌ನಲ್ಲಿ ಸೋತಿದ್ದೇವೆ.
ಆದರೆ ಈ ವರ್ಷ ತಪ್ಪು ಮಾಡುವುದಿಲ್ಲ. ಒಂದಿಬ್ಬರನ್ನೇ ತಂಡ ನೆಚ್ಚಿಕೊಳ್ಳದೆ ತಂಡ ಸಮತೋಲನ ಕಾಯ್ದುಕೊಂಡಿದೆ. ಟ್ರೋಫಿ ಗೆದ್ದರೆ ಮಾತ್ರ ನಮ್ಮ ಸಾಮರ್ಥ್ಯಕ್ಕೆ ಬೆಲೆ ಸಿಗಲಿದೆ.-ಅಸ್ಲಂ ಇನಾಮ್ದಾರ್, ಪುಣೆ ನಾಯಕ
ಗೆಲ್ಲುವ ವಿಶ್ವಾಸವಿದೆ ಪುಣೆ ತಂಡದಲ್ಲಿ ನಾವು ಯಾರನ್ನೂ ಟಾರ್ಗೆಟ್ ಮಾಡಿ ಆಡುವುದಿಲ್ಲ. ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ಅರಿವಿದೆ. ದೊಡ್ಡ ದೊಡ್ಡ ಆಟಗಾರರಿಲ್ಲದಿದ್ದರೂ ತಂಡವಾಗಿ ಆಡಿಯೇ ಇಲ್ಲಿವರೆಗೆ ತಲುಪಿದ್ದೇವೆ.-ಜೈದೀಪ್ ದಹಿಯಾ, ಹರ್ಯಾಣ ನಾಯಕ
ಫೈನಲ್‌ಗೆ ತಲುಪುವುದೇ ಒಂದು ಯಶಸ್ಸು ಮತ್ತು ಅದ್ಭುತ. ಈ ಬಾರಿ ಚಾಂಪಿಯನ್ ಆಗುವಂತದ್ದೇ ತಂಡ ನಮ್ಮಲ್ಲಿದೆ. ಕಳೆದ ಬಾರಿಗಿಂತಲೂ ಉತ್ತಮ ಆಟಗಾರರು ನಮ್ಮಲ್ಲಿದ್ದಾರೆ.
ಕಳೆದ ಫೈನಲ್‌ನಲ್ಲಿ ಅಸ್ಲಂ, ಮೋಹಿತ್ ಇರಲಿಲ್ಲ. ಈ ಬಾರಿ ಅವರೇ ನಮ್ಮ ಬಲ. ಶಾದ್ಲೂ ನಮ್ಮ ಪ್ಲಸ್ ಪಾಯಿಂಟ್. ಈ ಮೊದಲು ಬೆಂಗಳೂರು, ಬೆಂಗಾಲ್ ಚಾಂಪಿಯನ್ ಆದಾಗ ಇದ್ದ ತಂಡಕ್ಕಿಂತ ಬಲಿಷ್ಠವಾಗಿದೆ ಪುಣೆ.
ಕಪ್ ಗೆಲ್ಲುವ ವಿಶ್ವಾಸವಿದೆ.-ಬಿ.ಸಿ. ರಮೇಶ್, ಪುಣೆ ಕೋಚ್--03ನೇ ಮುಖಾಮುಖಿಟೂರ್ನಿಯಲ್ಲಿದು ಹರ್ಯಾಣ-ಪುಣೆ ನಡುವೆ 3ನೇ ಮುಖಾಮುಖಿ. ಲೀಗ್ ಹಂತದಲ್ಲಿ ಇತ್ತಂಡಗಳು ತಲಾ 1 ಬಾರಿ ಗೆದ್ದಿದ್ದವು.