ಒಲಿಂಪಿಕ್ಸ್‌ಗಾಗಿ ಈ ಬಾರಿ ವಿಂಬಲ್ಡನ್‌ನಲ್ಲಿ ಆಡಲ್ಲ ರಾಫೆಲ್ ನಡಾಲ್‌!

| Published : Jun 14 2024, 01:02 AM IST / Updated: Jun 14 2024, 04:22 AM IST

ಸಾರಾಂಶ

ಇತ್ತೀಚೆಗೆ ಫ್ರೆಂಚ್‌ ಓಪನ್‌ ಟೆನಿಸ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು. ಗಾಯದಿಂದ ಅವರು ಈಗಷ್ಟೇ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಲಂಡನ್‌: 22 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ರಾಫೆಲ್ ನಡಾಲ್‌ ಈ ವರ್ಷದ ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುವುದಾಗಿ ತಿಳಿಸಿದ್ದಾರೆ. 

ಪಕ್ಕೆಲುಬು ಗಾಯದಿಂದ ಬಳಲುತ್ತಿರುವ ಸ್ಪೇನ್‌ನ ನಡಾಲ್‌, ಇತ್ತೀಚೆಗೆ ಫ್ರೆಂಚ್‌ ಓಪನ್‌ ಟೆನಿಸ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು. ಗಾಯದಿಂದ ಈಗಷ್ಟೇ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿರುವ 38ರ ನಡಾಲ್‌, ವಿಂಬಲ್ಡನ್‌ನ ಹುಲ್ಲಿನ ಅಂಕಣದಲ್ಲಿ ಆಡುವ ಬದಲು ಒಲಿಂಪಿಕ್ಸ್‌ನಲ್ಲಿ ಆವೆಮಣ್ಣಿನ ಅಂಕಣದಲ್ಲೇ ಆಟ ಮುಂದುವರಿಸುವುದಾಗಿ ತಿಳಿಸಿದ್ದಾರೆ. ವಿಂಬಲ್ಡನ್‌ ಜು.1ರಿಂದ 14ರ ವರೆಗೆ ನಡೆಯಲಿದ್ದು, ಒಲಿಂಪಿಕ್ಸ್‌ ಜು.26ಕ್ಕೆ ಆರಂಭಗೊಳ್ಳಲಿದೆ.

ವಿಂಬಲ್ಡನ್‌ ಗೆದ್ದರೆ ಈ ಸಲ ₹28.8 ಕೋಟಿ ಬಹುಮಾನ

ಲಂಡನ್‌: ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿ ಬಹುಮಾನ ಮೊತ್ತವನ್ನು ಆಯೋಜಕರು ಬರಪೂರ ಹೆಚ್ಚಿಸಿದ್ದು, ಈ ವರ್ಷ ಸಿಂಗಲ್ಸ್‌ ಚಾಂಪಿಯನ್‌ ಆಗುವವರು 3.45 ಮಿಲಿಯನ್‌ ಡಾಲರ್‌(ಅಂದಾಜು 28.8 ಕೋಟಿ ರು.) ನಗದು ಬಹುಮಾನ ಪಡೆಯಲಿದ್ದಾರೆ. 

ಟೂರ್ನಿಯ ಒಟ್ಟು ಪ್ರಶಸ್ತಿ ಮೊತ್ತವನ್ನು 64 ಮಿಲಿಯನ್‌ ಯುಎಸ್‌ ಡಾಲರ್‌(ಅಂದಾಜು ₹534 ಕೋಟಿ)ಗೆ ಹೆಚ್ಚಿಸಲಾಗಿದೆ. ಇದು ಕಳೆದ ಬಾರಿಗಿಂತ ಶೆ.11.9ರಷ್ಟು(ಸುಮಾರು 56.5 ಕೋಟಿ ರು) ಹೆಚ್ಚು.ಕಳೆದ ವರ್ಷ ಕ್ರಮವಾಗಿ ಪುರುಷ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಕಾರ್ಲೊಸ್‌ ಆಲ್ಕರಜ್‌ ಹಾಗೂ ಮಾರ್ಕೆಟ್‌ ವೊಂಡ್ರೊಸೋವಾ ತಲಾ ₹25 ಕೋಟಿ ನಗದು ಬಹುಮಾನ ಪಡೆದಿದ್ದರು. ಈ ಬಾರಿ ಸಿಂಗಲ್ಸ್‌ನಲ್ಲಿ ರನ್ನರ್‌-ಅಪ್‌ ಸ್ಥಾನ ಪಡೆದವರಿಗೆ ಸುಮಾರು 14.9 ಕೋಟಿ ರು. ನಗದು ಬಹುಮಾನ ಲಭಿಸಲಿದೆ.