ಟೀಂ ಇಂಡಿಯಾ ಕೋಚ್‌ ಹುದ್ದೆ ತ್ಯಜಿಸಿದ ಬಳಿಕ ಮತ್ತೆ ಐಪಿಎಲ್‌ಗೆ ಮರಳಿದ ದ್ರಾವಿಡ್‌: ರಾಜಸ್ಥಾನಕ್ಕೆ ಕೋಚ್‌

| Published : Sep 05 2024, 12:36 AM IST / Updated: Sep 05 2024, 03:19 AM IST

ಟೀಂ ಇಂಡಿಯಾ ಕೋಚ್‌ ಹುದ್ದೆ ತ್ಯಜಿಸಿದ ಬಳಿಕ ಮತ್ತೆ ಐಪಿಎಲ್‌ಗೆ ಮರಳಿದ ದ್ರಾವಿಡ್‌: ರಾಜಸ್ಥಾನಕ್ಕೆ ಕೋಚ್‌
Share this Article
  • FB
  • TW
  • Linkdin
  • Email

ಸಾರಾಂಶ

ಟೀಂ ಇಂಡಿಯಾ ಕೋಚ್‌ ಹುದ್ದೆ ತ್ಯಜಿಸಿದ ಬಳಿಕ ಮತ್ತೆ ಐಪಿಎಲ್‌ಗೆ ಮರಳಿದ ದ್ರಾವಿಡ್‌. 2015ರ ಬಳಿಕ ಮತ್ತೆ ರಾಯಲ್ಸ್‌ ಬಳಗಕ್ಕೆ ಸೇರ್ಪಡೆ. 2012, 2013ರಲ್ಲಿ ರಾಜಸ್ಥಾನ ತಂಡದ ನಾಯಕರಾಗಿದ್ದ ದ್ರಾವಿಡ್‌.

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌, 2025ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಫ್ರಾಂಚೈಸಿಯೊಂದಿಗೆ ಈಗಾಗಲೇ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದು, ಹರಾಜಿಗೂ ಮುನ್ನ ಆಟಗಾರರನ್ನು ರೀಟೈನ್‌ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಭಾರತ ತಂಡಕ್ಕೆ ಟಿ20 ವಿಶ್ವಕಪ್‌ ಗೆಲ್ಲಿಸಿಕೊಟ್ಟ ದ್ರಾವಿಡ್‌, ಪ್ರಧಾನ ಕೋಚ್‌ ಹುದ್ದೆ ತ್ಯಜಿಸಿದ್ದರು. ಅವರನ್ನು ಕೆಕೆಆರ್‌ ಸೇರಿ ಕೆಲ ಐಪಿಎಲ್‌ ತಂಡಗಳು ಕೋಚ್‌ ಆಗಿ ಸೇವೆ ಸಲ್ಲಿಸುವಂತೆ ಸಂಪರ್ಕಿಸಿದ್ದವು ಎನ್ನುವ ಸುದ್ದಿ ಹರಿದಾಡಿತ್ತು. ಜೊತೆಗೆ ಇಂಗ್ಲೆಂಡ್‌ ತಂಡ ಸಹ ದ್ರಾವಿಡ್‌ರನ್ನು ಕೋಚ್‌ ಆಗಿ ನೇಮಿಸಿಕೊಳ್ಳಲು ಇಚ್ಛಿಸಿತ್ತು ಎನ್ನುವ ಸುದ್ದಿಗಳೂ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ದ್ರಾವಿಡ್‌ ಈ ಹಿಂದೆ ಐಪಿಎಲ್‌ನಲ್ಲಿ ತಾವು ಆಡಿದ್ದ ತಂಡಕ್ಕೇ ಮಾರ್ಗದರ್ಶನ ಮಾಡಲು ನಿರ್ಧರಿಸಿದ್ದಾರೆ.

ದ್ರಾವಿಡ್‌ 2012, 2013ರಲ್ಲಿ ರಾಜಸ್ಥಾನ ತಂಡವನ್ನು ಮುನ್ನಡೆಸಿದ್ದರು. ಬಳಿಕ 2 ವರ್ಷ ಕಾಲ ತಂಡದ ಮೆಂಟರ್‌ ಆಗಿ ಕಾರ್ಯನಿರ್ವಹಿಸಿದ್ದರು. 2016ರಲ್ಲಿ ರಾಯಲ್ಸ್‌ ಬಿಟ್ಟು ಡೆಲ್ಲಿ ಕ್ಯಾಪಿಟಲ್ಸ್‌ಗೆ ತಂಡಕ್ಕೆ ಹೋಗಿದ್ದ ದ್ರಾವಿಡ್‌ ಅಲ್ಲೂ ಮಾರ್ಗದರ್ಶಕನ ಪಾತ್ರ ನಿರ್ವಹಿಸಿದ್ದರು.

2019ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ನೇಮಕಗೊಂಡಿದ್ದ ದ್ರಾವಿಡ್‌, 2021ರಲ್ಲಿ ಭಾರತ ತಂಡದ ಪ್ರಧಾನ ಕೋಚ್‌ ಹುದ್ದೆಗೇರಿದ್ದರು.

ಇನ್ನು, ಈ ಹಿಂದಿನ ಆವೃತ್ತಿಗಳಲ್ಲಿ ರಾಜಸ್ಥಾನ ತಂಡದ ಕೋಚ್‌ ಆಗಿದ್ದ ಶ್ರೀಲಂಕಾದ ಕುಮಾರ್‌ ಸಂಗಕ್ಕರ, ಫ್ರಾಂಚೈಸಿಯೊಂದಿಗೇ ಉಳಿಯಲಿದ್ದು, ವಿದೇಶಿ ಲೀಗ್‌ಗಳಲ್ಲಿರುವ ತನ್ನ ತಂಡಗಳನ್ನು ನೋಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.