ಸಾರಾಂಶ
ಕೆ.ಎಲ್.ರಾಹುಲ್, ಧ್ರುವ್ ಜುರೆಲ್ ಹಾಗೂ ರವೀಂದ್ರ ಜಡೇಜಾ ಭರ್ಜರಿ ಶತಕಗಳ ನೆರವಿನಿಂದ ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ. ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 2ನೇ ದಿನದಂತ್ಯಕ್ಕೆ 5 ವಿಕೆಟ್ ನಷ್ಟದಲ್ಲಿ 448 ರನ್ ಕಲೆಹಾಕಿದ್ದು, 286 ರನ್ ಮುನ್ನಡೆ
ಅಹಮದಾಬಾದ್: ಕೆ.ಎಲ್.ರಾಹುಲ್, ಧ್ರುವ್ ಜುರೆಲ್ ಹಾಗೂ ರವೀಂದ್ರ ಜಡೇಜಾ ಭರ್ಜರಿ ಶತಕಗಳ ನೆರವಿನಿಂದ ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ. ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 2ನೇ ದಿನದಂತ್ಯಕ್ಕೆ 5 ವಿಕೆಟ್ ನಷ್ಟದಲ್ಲಿ 448 ರನ್ ಕಲೆಹಾಕಿದ್ದು, 286 ರನ್ ಮುನ್ನಡೆ ಪಡೆದಿದೆ.
ಮೊದಲ ದಿನದಂತ್ಯಕ್ಕೆ 2 ವಿಕೆಟ್‌ಗೆ 117 ರನ್ ಗಳಿಸಿದ್ದ ಭಾರತ, 2ನೇ ದಿನವೂ ಬ್ಯಾಟಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿತು. ನಾಯಕ ಶುಭ್‌ಮನ್ ಗಿಲ್ 50 ರನ್‌ಗೆ ಔಟಾದರೆ, ಅನುಭವಿ ಆಟಗಾರ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 11ನೇ ಶತಕ ಪೂರ್ಣಗೊಳಿಸಿದರು. 197 ಎಸೆತಗಳಲ್ಲಿ 100 ರನ್ ಗಳಿಸಿದ ಅವರು, ಊಟದ ವಿರಾದ ಬಳಿಕ ಮೊದಲ ಓವರ್‌ನಲ್ಲೇ ಔಟಾದರು. ಆ ಬಳಿಕ ವಿಂಡೀಸ್ ಬೌಲರ್‌ಗಳನ್ನು ಬೆಂಡೆತ್ತಿದ್ದು ಧ್ರುವ್ ಜುರೆಲ್ ಹಾಗೂ ರವೀಂದ್ರ ಜಡೇಜಾ. ಈ ಜೋಡಿ 5ನೇ ವಿಕೆಟ್‌ಗೆ 206 ರನ್ ಜೊತೆಯಾಟವಾಡಿತು.
ಆಕರ್ಷಕ ಹೊಡೆತಗಳ ಮೂಲಕ ರಂಜಿಸಿದ ಜುರೆಲ್, ಚೊಚ್ಚಲ ಅಂತಾರಾಷ್ಟ್ರೀಯ ಶತಕ ಪೂರ್ಣಗೊಳಿಸಿದರು. ಅವರು 210 ಎಸೆತಗಳನ್ನು ಎದುರಿಸಿ, 15 ಬೌಂಡರಿ, 3 ಸಿಕ್ಸರ್‌ನೊಂದಿಗೆ 125 ರನ್ ಸಿಡಿಸಿದರು. ತಮ್ಮ ಅಭೂತಪೂರ್ವ ಆಟ ಮುಂದುವರಿಸಿದ ರವೀಂದ್ರ ಜಡೇಜಾ ಕೂಡಾ ಮೂರಂಕಿ ಮೊತ್ತ ದಾಟಿದರು. ಟೆಸ್ಟ್‌ನಲ್ಲಿ 6ನೇ ಶತಕ ಪೂರ್ಣಗೊಳಿಸಿದ ಜಡೇಜಾ, 178 ಎಸೆತಗಳಲ್ಲಿ 104 ರನ್ ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅವರ ಜೊತೆ ವಾಷಿಂಗ್ಟನ್ ಸುಂದರ್ ಕೂಡಾ ಕ್ರೀಸ್‌ನಲ್ಲಿದ್ದಾರೆ. ನಾಯಕ ರಾಸ್ಟನ್ ಚೇಸ್ 2 ವಿಕೆಟ್ ಪಡೆದರು.45 ಬೌಂಡರಿ, 8 ಸಿಕ್ಸರ್:
ಭಾರತ ಒಟ್ಟು 128 ಓವರ್ ಆಡಿದ್ದು, 3.50ರ ರನ್ ರೇಟ್‌ನಲ್ಲಿ ರನ್ ಗಳಿಸಿದೆ. ತಂಡ ಒಟ್ಟು 45 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿದೆ. ಈ ಪೈಕಿ ಜಡೇಜಾ 5 ಸಿಕ್ಸರ್ ಬಾರಿಸಿದರು.
ಸ್ಕೋರ್: ವಿಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 162/10, ಭಾರತ ಮೊದಲ ಇನ್ನಿಂಗ್ಸ್ 448/5 (2ನೇ ದಿನದಂತ್ಯಕ್ಕೆ) (ಜುರೆಲ್ 125, ಜಡೇಜಾ ಔಟಾಗದೆ 104, ರಾಹುಲ್ 100, ರಾಸ್ಟನ್ ಚೇಸ್ 2-90)
---
80 ಸಿಕ್ಸರ್: ಧೋನಿ
ಹಿಂದಿಕ್ಕಿದ ಜಡೇಜಾ
ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಅವರು ಎಂ.ಎಸ್.ಧೋನಿಯನ್ನು ಹಿಂದಿಕ್ಕಿ, 4ನೇ ಸ್ಥಾನಕ್ಕೇರಿದ್ದಾರೆ. ಧೋನಿ 78 ಸಿಕ್ಸರ್ ಬಾರಿಸಿದ್ದರೆ, ಜಡೇಜಾ ಈಗ 80ರ ಗಡಿ ತಲುಪಿದ್ದಾರೆ. ಸೆಹ್ವಾಗ್ ಹಾಗೂ ರಿಷಭ್ ಪಂತ್ ತಲಾ 90 ಸಿಕ್ಸರ್‌ಗಳೊಂದಿಗೆ ಜಂಟಿ ಅಗ್ರಸ್ಥಾನ, ರೋಹಿತ್(88) 3ನೇ ಸ್ಥಾನದಲ್ಲಿದ್ದಾರೆ.
-
ತವರಿನಲ್ಲಿ 9 ವರ್ಷದ
ಬಳಿಕ ರಾಹುಲ್ ಶತಕ
ರಾಹುಲ್ ತವರಿನಲ್ಲಿ 9 ವರ್ಷಗಳ ಬಳಿಕ ಟೆಸ್ಟ್ ಶತಕ ಬಾರಿಸಿದ್ದಾರೆ. 2016ರ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ 199 ರನ್ ಗಳಿಸಿದ್ದ ರಾಹುಲ್, ಬಳಿಕ ಇದೇ ಮೊದಲ ಬಾರಿ ಭಾರತದಲ್ಲಿ ಶತಕ ಪೂರ್ಣಗೊಳಿಸಿದ್ದಾರೆ. ಅವರಿಗಿದು ತವರಿನಲ್ಲಿ 2ನೇ ಶತಕ. ಉಳಿದ 9 ಶತಕಗಳನ್ನು ವಿದೇಶದಲ್ಲಿ ಸಿಡಿಸಿದ್ದಾರೆ.
-
2025ರಲ್ಲಿ 3ನೇ ಬಾರಿ
ಇನ್ನಿಂಗ್ಸ್‌ನಲ್ಲಿ 3 ಶತಕ
2025ರಲ್ಲಿ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಭಾರತದ ಮೂವರು ಶತಕ ಬಾರಿಸಿದ್ದು ಇದೇ 3ನೇ ಬಾರಿ. ಲೀಡ್ಸ್, ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲೂ ಭಾರತೀಯರು ಈ ಸಾಧನೆ ಮಾಡಿದ್ದರು. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಲೀಡ್ಸ್‌ನಲ್ಲಿ ಜೈಸ್ವಾಲ್, ಗಿಲ್, ರಿಷಭ್, ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಗಿಲ್, ಜಡೇಜಾ, ವಾಷಿಂಗ್ಟನ್ ಸುಂದರ್ ಸೆಂಚುರಿ ಬಾರಿಸಿದ್ದರು.
-
ಶತಕವನ್ನು ಸೇನೆಗೆ
ಸಮರ್ಪಿಸಿದ ಜುರೆಲ್
ಟೆಸ್ಟ್‌ನ ಚೊಚ್ಚಲ ಶತಕವನ್ನು ಜುರೆಲ್ ಸೇನೆಗೆ ಸಮರ್ಪಿಸಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧನ ಪುತ್ರನಾಗಿರುವ ಜುರೆಲ್, ಅರ್ಧಶತಕ ಬಾರಿಸಿ ಸಲ್ಯೂಟ್ ಹೊಡೆದರೆ, ಶತಕದ ಬಳಿಕ ವಿಶೇಷವಾಗಿ ಬ್ಯಾಟ್ ಪ್ರದರ್ಶಿಸಿದರು. ಇನ್ನಿಂಗ್ಸ್ ಬಳಿಕ ಮಾತನಾಡಿದ ಅವರು, ‘ಅರ್ಧಶತಕದ ಬಳಿಕದ ಸಲ್ಯೂಟ್ ನನ್ನ ತಂದೆಗೆ. ನನ್ನ ಶತಕವನ್ನು ಸೇನೆಗೆ ಅರ್ಪಿಸುತ್ತೇನೆ. ಭಾರತೀಯ ಸೈನ್ಯವನ್ನು ನಾನು ಹತ್ತಿರದಿಂದ ಬಲ್ಲೆ. ಅವರು ಯುದ್ಧಭೂಮಿಯಲ್ಲಿ ಹೋರಾಡುವುದನ್ನು ನಮಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅವರ ಬಗ್ಗೆ ನನಗೆ ತುಂಬಾ ಗೌರವವಿದೆ’ ಎಂದಿದ್ದಾರೆ.
-
12 ಬ್ಯಾಟರ್
ಜುರೆಲ್ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಭಾರತದ 12ನೇ ವಿಕೆಟ್ ಕೀಪರ್. ಇದರಲ್ಲಿ ಜುರೆಲ್ ಸೇರಿ ಐವರು ತಮ್ಮ ಚೊಚ್ಚಲ ಶತಕ ಸಿಡಿಸಿದ್ದು ವಿಂಡೀಸ್ ವಿರುದ್ಧ.
05 ಸಿಕ್ಸರ್
ವಾರಿಕನ್ ವಿರುದ್ಧ ಜಡೇಜಾ 5 ಸಿಕ್ಸರ್ ಸಿಡಿಸಿದರು. ಇದು ಭಾರತದ ಪರ 2ನೇ ಗರಿಷ್ಠ. ಧೋನಿ ವಿಂಡೀಸ್‌ನ ಡೇವ್ ಮುಹಮ್ಮದ್ ವಿರುದ್ಧ 6 ಸಿಕ್ಸರ್ ಬಾರಿಸಿದ್ದರು.
20 ಶತಕ
ಅಂ.ರಾ. ಕ್ರಿಕೆಟ್‌ನಲ್ಲಿ ಕನ್ನಡಿಗ ರಾಹುಲ್ 20 ಶತಕ ಪೂರೈಸಿದ್ದಾರೆ. ಟೆಸ್ಟ್‌ನಲ್ಲಿ 11, ಏಕದಿನದಲ್ಲಿ 7 ಹಾಗೂ ಅಂ.ರಾ. ಟಿ20 ಕ್ರಿಕೆಟ್‌ನಲ್ಲಿ 2 ಶತಕಗಳನ್ನು ಸಿಡಿಸಿದ್ದಾರೆ.