ರಾಹುಲ್‌, ಜಡೇಜಾ ಬದಲು ಆಡೋರ್ಯಾರು?

| Published : Jan 31 2024, 02:17 AM IST / Updated: Jan 31 2024, 01:30 PM IST

Ravindra Jadeja, KL Rahul

ಸಾರಾಂಶ

ಇಂಗ್ಲೆಂಡ್‌ನ ‘ಬಾಜ್‌ಬಾಲ್‌’ ಆಟದ ಶೈಲಿಯನ್ನು ಲಘುವಾಗಿ ಪರಿಗಣಿಸಿದ್ದಕ್ಕೆ ಮೊದಲ ಟೆಸ್ಟ್‌ನಲ್ಲಿ ಸೋಲುವ ಮೂಲಕ ಬೆಲೆತೆತ್ತ ಭಾರತಕ್ಕೆ, ಫೆ.2ರಿಂದ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ಗೂ ಮುನ್ನ ಆಯ್ಕೆ ಗೊಂದಲ ಶುರುವಾಗಿದೆ.

ವಿಶಾಖಪಟ್ಟಣಂ: ಇಂಗ್ಲೆಂಡ್‌ನ ‘ಬಾಜ್‌ಬಾಲ್‌’ ಆಟದ ಶೈಲಿಯನ್ನು ಲಘುವಾಗಿ ಪರಿಗಣಿಸಿದ್ದಕ್ಕೆ ಮೊದಲ ಟೆಸ್ಟ್‌ನಲ್ಲಿ ಸೋಲುವ ಮೂಲಕ ಬೆಲೆತೆತ್ತ ಭಾರತಕ್ಕೆ, ಫೆ.2ರಿಂದ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ಗೂ ಮುನ್ನ ಆಯ್ಕೆ ಗೊಂದಲ ಶುರುವಾಗಿದೆ. 

ತಂಡದ ಕೆಲ ಆಟಗಾರರು ಲಯದಲ್ಲಿ ಇಲ್ಲದಿರುವುದು ಒಂದು ಸಮಸ್ಯೆಯಾದರೆ, ಪ್ರಮುಖ ಆಟಗಾರರಾದ ಕೆ.ಎಲ್‌.ರಾಹುಲ್‌, ರವೀಂದ್ರ ಜಡೇಜಾ 2ನೇ ಟೆಸ್ಟ್‌ನಿಂದ ಹೊರಬಿದ್ದಿರುವುದು ಮತ್ತೊಂದು ಸಮಸ್ಯೆ.

ರಾಹುಲ್‌ ಹಾಗೂ ಜಡೇಜಾ ಇಬ್ಬರೂ ಮೊದಲ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಆಟಗಾರರು. ತವರಿನ ಟೆಸ್ಟ್‌ಗಳಲ್ಲಿ ಜಡೇಜಾರಷ್ಟು ಪರಿಣಾಮಕಾರಿಯಾಗಬಲ್ಲ ಆಟಗಾರರು ಸಿಗುವುದು ಕಷ್ಟ. 

ಇನ್ನು ರಾಹುಲ್‌ ಶಸ್ತ್ರಚಿಕಿತ್ಸೆ ಬಳಿಕ ತಂಡಕ್ಕೆ ಸೇರಿದಾಗಿನಿಂದ ಅಮೋಘ ಲಯದಲ್ಲಿದ್ದರು. ಇನ್ನು ವಿರಾಟ್‌ ಕೊಹ್ಲಿ 2ನೇ ಪಂದ್ಯಕ್ಕೂ ಲಭ್ಯರಿಲ್ಲ. ಹೀಗಾಗಿ, ಮೊದಲ ಟೆಸ್ಟ್‌ ಸೋತು ಒತ್ತಡದಲ್ಲಿರುವ ಭಾರತ, 2ನೇ ಪಂದ್ಯದಲ್ಲಿ ಇವರಿಬ್ಬರ ಸ್ಥಾನದಲ್ಲಿ ಯಾರನ್ನು ಆಡಿಸಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ನಾಯಕ ರೋಹಿತ್‌ ಶರ್ಮಾ ಹಾಗೂ ಕೋಚ್‌ ರಾಹುಲ್‌ ದ್ರಾವಿಡ್‌ ಮುಂದೆ ಹಲವು ಆಯ್ಕೆಗಳಿವೆ. ಆಯ್ಕೆಗಾರರು ಸರ್ಫರಾಜ್‌ ಖಾನ್‌, ಸೌರಭ್‌ ಕುಮಾರ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಮೂವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದ್ದಾರೆ. 

ಮೊದಲ ಪಂದ್ಯದಲ್ಲೇ 15 ಸದಸ್ಯರ ತಂಡದಲ್ಲಿದ್ದ ರಜತ್‌ ಪಾಟೀದಾರ್‌ ಮೊದಲ ಆಯ್ಕೆ ಆಗಬಹುದು. ರಾಹುಲ್‌ ಬದಲು ಮಧ್ಯಮ ಕ್ರಮಾಂಕದಲ್ಲಿ ರಜತ್‌ ಆಡುವ ಸಾಧ್ಯತೆ ಹೆಚ್ಚು. ಇನ್ನು ಜಡೇಜಾರ ಸ್ಥಾನವನ್ನು ಕುಲ್ದೀಪ್‌ ಯಾದವ್‌ಗೆ ನೀಡಿದರೆ ಅಚ್ಚರಿ ಇಲ್ಲ.

ದೇಸಿ ಕ್ರಿಕೆಟ್‌ನಲ್ಲಿ ರಾಶಿ ರಾಶಿ ರನ್‌ ಸಿಡಿಸಿರುವ ಸರ್ಫರಾಜ್‌ ಖಾನ್‌ ಸಹ ಪಾದಾರ್ಪಣೆ ಮಾಡುವ ವಿಶ್ವಾಸದಲ್ಲಿದ್ದಾರೆ. ಒಂದು ವೇಳೆ ಲಯದಲ್ಲಿರದ ಶುಭ್‌ಮನ್‌ ಗಿಲ್‌ ಹಾಗೂ ಶ್ರೇಯಸ್‌ ಅಯ್ಯರ್‌ ಪೈಕಿ ಒಬ್ಬರನ್ನು ಹೊರಗಿಡಲು ತಂಡ ನಿರ್ಧರಿಸಿದರೆ, ಸರ್ಫರಾಜ್‌ಗೆ ಅವಕಾಶ ಸಿಗಬಹುದು. 

ಒಂದು ವೇಳೆ ವಿಶಾಖಪಟ್ಟಣಂನ ಪಿಚ್‌ ಸ್ಪಿನ್‌ ಸ್ನೇಹಿಯಾಗಿ, ರಾಹುಲ್‌ ಜಾಗದಲ್ಲಿ ಸರ್ಫರಾಜ್‌ ಆಡುವುದೇ ಉತ್ತಮ ಎನ್ನುವ ನಿರ್ಧಾರವನ್ನು ತಂಡದ ಆಡಳಿತ ಕೈಗೊಳ್ಳಬಹುದು.

ಏಕೈಕ ವೇಗಿ?:
ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಕೇವಲ ಒಬ್ಬ ವೇಗಿ ಹಾಗೂ ನಾಲ್ಕು ಸ್ಪಿನ್‌ ಆಯ್ಕೆಗಳೊಂದಿಗೆ ಕಣಕ್ಕಿಳಿದಿತ್ತು. 2ನೇ ಟೆಸ್ಟ್‌ನಲ್ಲಿ ಭಾರತವೂ ಅದೇ ರೀತಿ ಯೋಜನೆ ಕೈಗೊಳ್ಳಬಹುದಾ ಎನ್ನುವ ಕುತೂಹಲವೂ ಇದೆ. 

ಹಾಗಾದಲ್ಲಿ, ಮೊಹಮದ್‌ ಸಿರಾಜ್‌ರನ್ನು ಹೊರಗಿಟ್ಟು ವಾಷಿಂಗ್ಟನ್‌ ಸುಂದರ್‌ರನ್ನು ಆಡಿಸಬಹುದು. ವಾಷಿಂಗ್ಟನ್‌ರ ಸೇರ್ಪಡೆ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ಇನ್ನಷ್ಟು ಬಲ ತುಂಬಲಿದೆ. 

ಎಡಗೈ ಸ್ಪಿನ್ನರ್‌ ಸೌರಭ್‌ ಕುಮಾರ್‌ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದು, ಅವರೂ ಕೂಡ ತಕ್ಕಮಟ್ಟಿಗೆ ಬ್ಯಾಟ್‌ ಮಾಡಬಲ್ಲರು. ಒಟ್ಟಾರೆ, ವಿಶಾಖಪಟ್ಟಣಂ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಆಯ್ಕೆ ಗೊಂದಲ ಕಾಡುತ್ತಿದ್ದು, ರೋಹಿತ್‌ ಹಾಗೂ ದ್ರಾವಿಡ್‌ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.