ಆರ್‌ಸಿಬಿಯ ಹೊಸ ಅಧ್ಯಾಯ ಸೋಲಿನೊಂದಿಗೆ ಮುಕ್ತಾಯ!

| Published : May 23 2024, 01:30 AM IST / Updated: May 23 2024, 04:14 AM IST

ಸಾರಾಂಶ

ಸತತ 6 ಪಂದ್ಯ ಗೆದ್ದಿದ್ದ ಆರ್‌ಸಿಬಿ ಓಟಕ್ಕೆ ಎಲಿಮಿನೇಟರ್‌ನಲ್ಲಿ ರಾಯಲ್ಸ್‌ ಬ್ರೇಕ್‌. 4 ವಿಕೆಟ್‌ನಿಂದ ಗೆದ್ದು 2ನೇ ಕ್ವಾಲಿಫೈಯರ್‌ಗೇರಿದ ಆರ್‌ಆರ್‌. ಆರ್‌ಸಿಬಿ ಟೂರ್ನಿಯಿಂದಲೇ ಹೊರಕ್ಕೆ । ಬ್ಯಾಟಿಂಗ್‌ ವೈಫಲ್ಯಕ್ಕೊಳಗಾದ ಆರ್‌ಸಿಬಿ 8 ವಿಕೆಟ್‌ಗೆ 172 । 19 ಓವರ್‌ನಲ್ಲೇ ಗೆದ್ದು ಬೀಗಿದ ರಾಯಲ್ಸ್‌

ಅಹಮದಾಬಾದ್‌: ‘ಈ ಸಲ ಕಪ್‌ ನಮ್ದೇ’ ಎನ್ನುತ್ತಿದ್ದ ಅಪಾರ ಪ್ರಮಾಣದ ಆರ್‌ಸಿಬಿ ಅಭಿಮಾನಿಗಳ ಹೃದಯ ಒಡೆದಿದೆ. ಕಪ್‌ ಕನಸಿನೊಂದಿಗೆ 17 ವರ್ಷದಿಂದಲೂ ಕಾತರದಿಂದ ಕಾಯುತ್ತಿದ್ದ ಆರ್‌ಸಿಬಿ ಆಟಗಾರರು, ಅಭಿಮಾನಿಗಳು ಟ್ರೋಫಿ ಗೆಲ್ಲಲು ಮತ್ತಷ್ಟು ಕಾಲ ಕಾಯುವಂತಾಗಿದೆ.

 ಅತ್ಯದ್ಭುತ ಕಮ್‌ಬ್ಯಾಕ್‌ ಮೂಲಕ ಪ್ಲೇ-ಆಫ್‌ ಪ್ರವೇಶಿಸಿದ್ದ ಆರ್‌ಸಿಬಿ ಬುಧವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ 00 ರನ್‌ಗಳಿಂದ ಪರಾಭವಗೊಂಡು 17ನೇ ಆವೃತ್ತಿ ಟೂರ್ನಿಯಿಂದಲೇ ಹೊರಬಿದ್ದಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದರೂ ನಿರ್ಣಾಯಕ ಪಂದ್ಯದಲ್ಲಿ ಅಭೂತಪೂರ್ವ ಪ್ರದರ್ಶನ ತೋರಿದ ರಾಜಸ್ಥಾನ 2ನೇ ಕ್ವಾಲಿಫೈಯರ್‌ಗೆ ತೇರ್ಗಡೆಯಾಗಿದೆ.

ಲೀಗ್‌ ಹಂತದ ಕೊನೆ 6 ಪಂದ್ಯಗಳಲ್ಲಿ ಅತ್ಯದ್ಭುತ ಆಟವಾಡಿ, ಗೆದ್ದು ನಾಕೌಟ್‌ಗೇರಿದ್ದ ಆರ್‌ಸಿಬಿಯೇ ಈ ಪಂದ್ಯದಲ್ಲಿ ಗೆಲ್ಲುವ ಫೇವರಿಟ್‌ ಎಂದೆನಿಸಿತ್ತು. ಆದರೆ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದ ರಾಜಸ್ಥಾನ ತಂಡ ಆರ್‌ಸಿಬಿಯನ್ನು ಮನೆಗಟ್ಟಿದೆ.ಟಾಸ್‌ ಗೆದ್ದು ರಾಜಸ್ಥಾನ ಫೀಲ್ಡಿಂಗ್‌ ಆಯ್ದುಕೊಂಡಾಗಲೇ ಆರ್‌ಸಿಬಿ ಅರ್ಧ ಸೋತಿತ್ತು. 

ಚೇಸಿಂಗ್‌ ಸುಲಭವಾಗುವ ಪಿಚ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ಕಲೆಹಾಕಿದ್ದು 8 ವಿಕೆಟ್‌ಗೆ 172 ರನ್‌. ಕಳೆದ ಕೆಲ ಪಂದ್ಯಗಳ ರಾಜಸ್ಥಾನದ ಬ್ಯಾಟಿಂಗ್‌ ಹಾಗೂ ಆರ್‌ಸಿಬಿಯ ಬೌಲಿಂಗ್‌ ಗಮನಿಸಿದರೆ ಈ ಮೊತ್ತವನ್ನು ರಾಯಲ್ಸ್‌ ಬೆನ್ನಟ್ಟುವುದು ಅನುಮಾನವಿತ್ತು.

ಆರಂಭಿಕರಾದ ಯಶಸ್ವಿ ಜೈಸ್ವಾಲ್‌ ಹಾಗೂ ಕೊಹ್ಲೆರ್‌ ಕ್ಯಾಡ್‌ಮೊರ್‌(20) ಮೊದಲ ವಿಕೆಟ್‌ಗೆ 46 ರನ್‌ ಸೇರಿಸಿದರು. 30 ಎಸೆತಗಳಲ್ಲಿ 45 ರನ್‌ ಸಿಡಿಸಿದ ಜೈಸ್ವಾಲ್‌ ಹಾಗೂ ನಾಯಕ ಸ್ಯಾಮ್ಸನ್‌(17) 4 ಎಸೆತಗಳ ಅಂತರದಲ್ಲಿ ಪೆವಿಲಿಯನ್‌ ಸೇರಿದಾಗ ತಂಡ ಆತಂಕಕ್ಕೀಡಾಗಿತ್ತು. ಧ್ರುವ್‌ ಜುರೆಲ್‌(08) ಕೂಡಾ ಔಟಾಗಿದ್ದು ಆರ್‌ಸಿಬಿ ಪಾಳಯದಲ್ಲಿ ಸಂತಸ ಮೂಡಿಸಿತು. ಆದರೆ ರಿಯಾನ್‌ ಪರಾಗ್‌(26 ಎಸೆತದಲ್ಲಿ 36), ಹೆಟ್ಮೇಯರ್‌(14 ಎಸೆತಗಳಲ್ಲಿ 26) ತಂಡವನ್ನು ಆಧರಿಸಿದರು. 14 ಓವರಲ್ಲಿ 115 ರನ್‌ ಗಳಿಸಿದ್ದರೂ, ಬಳಿಕ 3 ಓವರಲ್ಲಿ ಈ ಜೋಡಿ 39 ರನ್‌ ದೋಚಿ ಪಂದ್ಯ ಆರ್‌ಸಿಬಿ ಕೈ ಜಾರುವಂತೆ ಮಾಡಿತು. ಇವರಿಬ್ಬರನ್ನೂ 18ನೇ ಓವರಲ್ಲಿ ಸಿರಾಜ್‌ ಔಟ್‌ ಮಾಡಿದರೂ, ಪೊವೆಲ್‌(ಔಟಾಗದೆ 16) ತಂಡವನ್ನು ಗೆಲ್ಲಿಸಿದರು.

ಬ್ಯಾಟಿಂಗ್‌ ವೈಫಲ್ಯ: ಲೀಗ್‌ ಹಂತದ ಕೊನೆಯಲ್ಲಿ ಅಬ್ಬರಿಸಿದ್ದ ಆರ್‌ಸಿಬಿ ಬ್ಯಾಟರ್‌ಗಳು ಈ ಪಂದ್ಯದಲ್ಲಿ ಸಪ್ಪೆಯಾದರು. ಪವರ್‌-ಪ್ಲೇನಲ್ಲಿ 50 ರನ್‌ ಬಂದರೂ, 8ನೇ ಓವರ್‌ಗೂ ಮುನ್ನವೇ ಡು ಪ್ಲೆಸಿ(17) ಹಾಗೂ ವಿರಾಟ್‌ ಕೊಹ್ಲಿ(33) ಔಟಾಗಿದ್ದು ತಂಡಕ್ಕೆ ಮುಳುವಾಯಿತು. ಆ ಬಳಿಕ ತಂಡಕ್ಕೆ ಚೇತರಿಸುವ ಅವಕಾಶವಿದ್ದರೂ, 13ನೇ ಓವರಲ್ಲಿ ಗ್ರೀನ್‌(27) ಹಾಗೂ ಮ್ಯಾಕ್ಸ್‌ವೆಲ್‌ರನ್ನು ಔಟ್ ಮಾಡಿದ ಅಶ್ವಿನ್‌ ಆರ್‌ಸಿಬಿಗೆ ಚೇತರಿಸಲಾಗದ ಪೆಟ್ಟು ನೀಡಿದರು. ಆ ಬಳಿಕ ರಜತ್‌ ಪಾಟೀದಾರ್‌(22 ಎಸೆತಗಳಲ್ಲಿ 34) ಹಾಗೂ ಲೊಮ್ರೊರ್‌(17 ಎಸೆತಗಳಲ್ಲಿ 32) ಹೋರಾಟ ತಂಡವನ್ನು 170ರ ಗಡಿ ದಾಟಿಸಿತು. ಆವೇಶ್‌ ಖಾನ್‌ 3 ವಿಕೆಟ್ ಕಿತ್ತರು.ಸ್ಕೋರ್‌: ಆರ್‌ಸಿಬಿ 20 ಓವರಲ್ಲಿ 172/8 (ರಜತ್‌ 34, ಕೊಹ್ಲಿ 33, ಲೊಮ್ರೊರ್ 32, ಆವೇಶ್‌ 3-44), ರಾಜಸ್ಥಾನ 19 ಓವರಲ್ಲಿ 174/6 (ಜೈಸ್ವಾಲ್‌ 45, ರಿಯಾನ್‌ 36, ಹೆಟ್ಮೇಯರ್‌ 26, ಸಿರಾಜ್‌ 2-33) ಪಂದ್ಯಶ್ರೇಷ್ಠ: ಅಶ್ವಿನ್‌

ಮಹಿಳೆಯರಿಗೆ ಸಿಕ್ಕ ಕಪ್‌ ಪುರುಷರಿಗೆ ಗಗನ ಕುಸುಮ!

ಆರ್‌ಸಿಬಿ ಮಹಿಳಾ ತಂಡ ಇತ್ತೀಚೆಗಷ್ಟೇ 2ನೇ ಆವೃತ್ತಿ ಡಬ್ಲ್ಯುಪಿಎಲ್‌ನಲ್ಲಿ ಟ್ರೋಫಿ ಗೆದ್ದಿತ್ತು. ಇದರೊಂದಿಗೆ ಪುರುಷರ ತಂಡದ ಚಾರ್ಮ್‌ ಕೂಡಾ ಬದಲಾಗಬಹುದು ಎಂಬ ನಂಬಿಕೆ ಅಭಿಮಾನಿಗಳಲ್ಲಿತ್ತು. ಆದರೆ ಪುರುಷರು ಮತ್ತೊಮ್ಮೆ ಕಪ್‌ ಗೆಲ್ಲದೆ ಬರಿಗೈಯಲ್ಲಿ ಹಿಂದಿರುಗಿದ್ದು, ಇನ್ನಷ್ಟು ಕಾಲ ಕಾಯಬೇಕಿದೆ.

5 ವರ್ಷದಲ್ಲಿ 3ನೇ ಬಾರಿ ಎಲಿಮಿನೇಟರ್‌ ಸೋಲು

ಆರ್‌ಸಿಬಿ ಕಳೆದ 5 ವರ್ಷಗಳಲ್ಲಿ 3 ಬಾರಿ ಎಲಿಮಿನೇಟರ್‌ನಲ್ಲೇ ಅಭಿಯಾನ ಕೊನೆಗೊಳಿಸಿದೆ. 2020, 2021 ಹಾಗೂ 2024ರಲ್ಲಿ ಎಲಿಮಿನೇಟರ್‌ನಲ್ಲಿ ಸೋತಿದೆ. 2022ರಲ್ಲಿ ಕ್ವಾಲಿಫೈಯರ್‌ 2ರಲ್ಲಿ ಸೋತಿದ್ದ ತಂಡ ಕಳೆದ ವರ್ಷ 6ನೇ ಸ್ಥಾನಿಯಾಗಿತ್ತು.

01ನೇ ಸೋಲು: ಆರ್‌ಸಿಬಿ ಈ ವರ್ಷ ಮೇ ತಿಂಗಳಲ್ಲಿ ಮೊದಲ ಸೋಲು ಕಂಡಿತು. ಲೀಗ್‌ ಹಂತದ ಕೊನೆ 4 ಪಂದ್ಯದಲ್ಲೂ ತಂಡ ಗೆದ್ದಿತ್ತು.

18ನೇ ಬಾರಿ: ಮ್ಯಾಕ್ಸ್‌ವೆಲ್‌ ಐಪಿಎಲ್‌ನಲ್ಲಿ 18ನೇ ಬಾರಿ ಸೊನ್ನೆಗೆ ಔಟಾದರು. ಇದು ಜಂಟಿ ಗರಿಷ್ಠ. ದಿನೇಶ್‌ ಕಾರ್ತಿಕ್‌ ಕೂಡಾ 18 ಬಾರಿ ಸೊನ್ನೆ ಸುತ್ತಿದ್ದಾರೆ.

10 ಸೋಲು: ಐಪಿಎಲ್‌ ಪ್ಲೇ-ಆಫ್‌ನಲ್ಲಿ 10 ಬಾರಿ ಸೋಲು ಕಂಡ ಮೊದಲ ತಂಡ ಆರ್‌ಸಿಬಿ. 

01ನೇ ಬೌಲರ್‌: ಐಪಿಎಲ್‌ನ 2 ತಂಡಗಳ ಪರ ಗರಿಷ್ಠ ವಿಕೆಟ್‌ ಸರದಾರ ಎನಿಸಿಕೊಂಡ ಏಕೈಕ ಬೌಲರ್ ಚಹಲ್‌. ಆರ್‌ಸಿಬಿ, ರಾಜಸ್ಥಾನ ಪರ ಚಹಲ್‌ ಗರಿಷ್ಠ ವಿಕೆಟ್‌ ಪಡೆದಿದ್ದಾರೆ.