ಸಾರಾಂಶ
ಬೆಂಗಳೂರು : ಕರ್ನಾಟಕ ರಾಜ್ಯ ಟೆನಿಸ್ ಅಸೋಸಿಯೇಷನ್ (ಕೆಎಸ್‌ಎಲ್‌ಟಿಎ) ಆಯೋಜಿಸುತ್ತಿರುವ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ 125 ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಹಾಲಿ ಚಾಂಪಿಯನ್‌ಗಳಾದ ರಾಮ್ ಕುಮಾರ್ ರಾಮನಾಥನ್ ಮತ್ತು ಸಾಕೇತ್ ಮೈನೇನಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತೀಯ ಜೋಡಿಯು ಚೆಕ್ ಗಣರಾಜ್ಯದ ಹೈನೆಕ್ ಬಾರ್ಟನ್ ಮತ್ತು ಉಕ್ರೇನ್‌ನ ಎರಿಕ್ ವ್ಯಾನ್‌ಶೆಲ್ ಬೋಯಿಮ್ ವಿರುದ್ಧ 6-3, 6-3 ಸೆಟ್‌ಗಳಿಂದ ಜಯಿಸಿತು.
ಇದೇ ವೇಳೆ ಭಾರತದ ಸಿದ್ಧಾಂತ್ ಬಾಂಥಿಯಾ ಮತ್ತು ಪರೀಕ್ಷಿತ್ ಸೋಮಾನಿ ಜೋಡಿ ಕೂಡ ಸೆಮೀಸ್‌ಗೇರಿದೆ. ಕ್ವಾರ್ಟರ್ ಫೈನಲ್‌ನಲ್ಲಿ ನಿಕೋಲಸ್ ಮೆಜಿಯಾ ಮತ್ತು ಬರ್ನಾರ್ಡ್ ಟಾಮಿಕ್ ವಿರುದ್ಧ 7-5, 6-0 ಸೆಟ್‌ಗಳಿಂದ ಗೆಲುವು ಸಾಧಿಸಿತು.
ಇನ್ನು ಸಿಂಗಲ್ಸ್‌ನಲ್ಲಿ ಹೈನೆಕ್ ಬಾರ್ಟನ್ ತಮ್ಮ ಕನಸಿನ ಓಟವನ್ನು ಮುಂದುವರಿಸಿದರು. ಮೊದಲ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ವಿಟ್ ಕೊಪ್ರಿವಾ ವಿರುದ್ಧ ಜಯ ಗಳಿಸಿದ್ದ ಹೈನೆಕ್, 2ನೇ ಸುತ್ತಿನಲ್ಲಿ 7-6 (5), 6-3 ಸೆಟ್‌ಗಳಿಂದ ಡೆನ್ಮಾರ್ಕ್ ನ ಆಗಸ್ಟ್ ಹೋಲ್ಮಗ್ರೆನ್ ವಿರುದ್ಧ ಜಯಗಳಿಸಿ ಕ್ವಾರ್ಟರ್ ಫೈನಲ್ ತಲುಪಿದರು.