ಡೇವಿಸ್‌ ಕಪ್‌ ಟೆನಿಸ್‌: ಪಾಕಿಸ್ತಾನ ವಿರುದ್ಧ ಭಾರತಕ್ಕೆ 2-0 ಮುನ್ನಡೆ

| Published : Feb 04 2024, 01:31 AM IST

ಸಾರಾಂಶ

ಮೊದಲ ದಿನ ಸಿಂಗಲ್ಸ್‌ನಲ್ಲಿ ರಾಮ್‌ಕುಮಾರ್‌ ರಾಮನಾಥನ್‌, ಬಾಲಾಜಿ ಗೆಲುವು ಸಾಧಿಸಿದರು. ಭಾನುವಾರ ಡಬಲ್ಸ್‌ ಹಾಗೂ ರಿವರ್ಸ್‌ ಸಿಂಗಲ್ಸ್‌ ಪಂದ್ಯಗಳು ನಡೆಯಲಿದ್ದು, ಭಾರತ ಕ್ಲೀನ್‌ ಸ್ವೀಪ್‌ ಮೇಲೆ ಕಣ್ಣಿಟ್ಟಿದೆ. ಈ ಮುಖಾಮುಖಿ ಗೆದ್ದು ವಿಶ್ವ ಗುಂಪು-1ರಲ್ಲೇ ಉಳಿಯುವುದು ಭಾರತದ ಗುರಿ.

ಇಸ್ಲಾಮಾಬಾದ್‌: ಡೇವಿಸ್‌ ಕಪ್‌ ವಿಶ್ವ ಗುಂಪು-1ರ ಪ್ಲೇ-ಆಫ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ. ಮೊದಲ ದಿನವಾದ ಶನಿವಾರ ನಡೆದ ಎರಡೂ ಸಿಂಗಲ್ಸ್‌ ಪಂದ್ಯಗಳಲ್ಲಿ ಭಾರತೀಯ ಟೆನಿಸಿಗರು ಜಯಭೇರಿ ಬಾರಿಸಿದರು. ಮೊದಲ ಮುಖಾಮುಖಿಯಲ್ಲಿ ರಾಮ್‌ಕುಮಾರ್‌ ರಾಮನಾಥನ್‌ 6-7, 7-6, 6-0 ಸೆಟ್‌ಗಳಲ್ಲಿ ಪಾಕಿಸ್ತಾನದ ಅನುಭವಿ ಆಟಗಾರ ಐಸಾಮ್‌-ಉಲ್‌ ಹಕ್‌ ಖುರೇಷಿ ವಿರುದ್ಧ ಗೆದ್ದರು.ಚಳಿಯ ವಾತಾವರಣಕ್ಕೆ ಹೊಂದಿಕೊಳ್ಳಲು ರಾಮ್‌ಗೆ ಆರಂಭದಲ್ಲಿ ಕಷ್ಟವಾದರೂ, ಪಂದ್ಯ ಸಾಗಿದಂತೆ ತಮ್ಮ ಆಟದ ಹಿಡಿತ ಕಂಡುಕೊಂಡರು. 2ನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಎದುರಾದರೂ, ಸೆಟ್‌ ತಮ್ಮದಾಗಿಸಿಕೊಂಡ ರಾಮ್‌, 3ನೇ ಸೆಟ್‌ನಲ್ಲಿ ಖುರೇಷಿಗೆ ಒಂದೂ ಗೇಮ್‌ ಬಿಟ್ಟುಕೊಡಲಿಲ್ಲ. 43 ವರ್ಷದ ಖುರೇಷಿ, 3ನೇ ಸೆಟ್‌ ವೇಳೆಗೆ ಸ್ನಾಯು ಸೆಳೆತದ ಸಮಸ್ಯೆಗೆ ಒಳಗಾಗಿ ಸುಲಭವಾಗಿ ಸೋಲೊಪ್ಪಿಕೊಂಡರು. 2ನೇ ಮುಖಾಮುಖಿಯಲ್ಲಿ ಶ್ರೀರಾಮ್‌ ಬಾಲಾಜಿ 7-5, 6-3 ಸೆಟ್‌ಗಳಲ್ಲಿ 44 ವರ್ಷದ ಅಕೀಲ್‌ ಖಾನ್‌ ವಿರುದ್ಧ ಜಯಿಸಿದರು.

ಭಾನುವಾರ ಡಬಲ್ಸ್‌ ಹಾಗೂ ರಿವರ್ಸ್‌ ಸಿಂಗಲ್ಸ್‌ ಪಂದ್ಯಗಳು ನಡೆಯಲಿದ್ದು, ಭಾರತ ಕ್ಲೀನ್‌ ಸ್ವೀಪ್‌ ಮೇಲೆ ಕಣ್ಣಿಟ್ಟಿದೆ. ಈ ಮುಖಾಮುಖಿ ಗೆದ್ದು ವಿಶ್ವ ಗುಂಪು-1ರಲ್ಲೇ ಉಳಿಯುವುದು ಭಾರತದ ಗುರಿಯಾಗಿದೆ.