ಸಾರಾಂಶ
ಅಹಮದಾಬಾದ್: ಅತಿಯಾದ ಆತ್ಮವಿಶ್ವಾಸ, ಹೊಡೆತಗಳ ಆಯ್ಕೆಯಲ್ಲಿ ಭಾರಿ ಎಡವಟ್ಟಿನಿಂದಾಗಿ ಗುಜರಾತ್ ವಿರುದ್ಧ ಸುಲಭವಾಗಿ ಗೆಲ್ಲಬಹುದಾಗಿದ್ದ ರಣಜಿ ಪಂದ್ಯವನ್ನು ಕರ್ನಾಟಕ 6 ರನ್‌ಗಳಿಂದ ಸೋತು ನಿರಾಸೆ ಅನುಭವಿಸಿತು.
ಗೆಲ್ಲಲು ಕೇವಲ 110 ರನ್ ಗುರಿ ಬೆನ್ನತ್ತಿದ ಕರ್ನಾಟಕ ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 50 ರನ್ ಗಳಿಸಿತ್ತು, ಆದರೆ ಎಡಗೈ ಸ್ಪಿನ್ನರ್ ಸಿದ್ಧಾರ್ಥ್ ದೇಸಾಯಿ 42 ರನ್‌ಗೆ 7 ವಿಕೆಟ್ ಕಿತ್ತ ಪರಿಣಾಮ, ಕರ್ನಾಟಕ 53 ರನ್‌ಗೆ ಎಲ್ಲಾ 10 ವಿಕೆಟ್ ಕಳೆದುಕೊಂಡು, 103 ರನ್‌ಗೆ ಸರ್ವಪತನಗೊಂಡಿತು.
ಚೊಚ್ಚಲ ಪಂದ್ಯವಾಡಿದ ರಿಂಕೇಶ್ ವಘೇಲಾ 3 ವಿಕೆಟ್ ಕಬಳಿಸಿ, ಸಿದ್ಧಾರ್ಥ್‌ಗೆ ಉತ್ತಮ ಬೆಂಬಲ ನೀಡಿದರು. ಈ ಜಯದೊಂದಿಗೆ ಗುಜರಾತ್ ‘ಸಿ’ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ರಾಜ್ಯ ತಂಡ 3ನೇ ಸ್ಥಾನಕ್ಕೆ ಕುಸಿಯಿತು.
3ನೇ ದಿನದಂತ್ಯಕ್ಕೆ 2ನೇ ಇನ್ನಿಂಗ್ಸಲ್ಲಿ 7 ವಿಕೆಟ್‌ಗೆ 171 ರನ್ ಗಳಿಸಿದ್ದ ಗುಜರಾತ್, 4ನೇ ದಿನವಾದ ಸೋಮವಾರ ಆ ಮೊತ್ತಕ್ಕೆ 48 ರನ್ ಸೇರಿಸಿತು. 110 ರನ್ ಗುರಿಯನ್ನು ಸಾಧ್ಯವಾದಷ್ಟು ಬೇಗ ತಲುಪುವ ನಿಟ್ಟಿನಲ್ಲಿ 2ನೇ ಇನ್ನಿಂಗ್ಸಲ್ಲಿ ಆಕ್ರಮಣಕಾರಿ ಆಟಕ್ಕಿಳಿದ ಕರ್ನಾಟಕ, 9 ಓವರಲ್ಲಿ 50 ರನ್ ಕಲೆಹಾಕಿತು.
10ನೇ ಓವರಲ್ಲಿ ಮಯಾಂಕ್ (19) ಔಟಾಗುತ್ತಿದ್ದಂತೆ ರಾಜ್ಯ ತಂಡದ ಪತನ ಆರಂಭಗೊಂಡಿತು. ಅನಗತ್ಯವಾಗಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಪಡಿಕ್ಕಲ್ (31) ಕೈ ಸುಟ್ಟುಕೊಂಡರು. ನಿಕಿನ್ (4), ಮನೀಶ್ (0), ಸುಜಯ್ (0) ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್‌ಗೆ ಮರಳಿದರು.
ಗಾಯದ ಕಾರಣ ಆರಂಭಿಕನಾಗಿ ಕಣಕ್ಕಿಳಿಯದಿದ್ದರೂ ಸಮರ್ಥ್ ಕ್ರೀಸ್‌ಗಿಳಿಯುವ ಪರಿಸ್ಥಿತಿ ಎದುರಾಯಿತು. ಅವರು ಸಮರ್ಥ್ (2) ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. ಶುಭಾಂಗ್ ಹೆಗಡೆ (27) ಹೋರಾಟ ತಂಡಕ್ಕೆ ಸಾಕಾಗಲಿಲ್ಲ.
ಗಾಯಾಳು ಪ್ರಸಿದ್ಧ್ (07) ಹಾಗೂ ಕೌಶಿಕ್ (04) ಕೊನೆಯ ವಿಕೆಟ್‌ಗೆ 11 ರನ್ ಸೇರಿಸಿದರೂ, ಗೆಲುವಿನಂಚಿನಲ್ಲಿ ಕರ್ನಾಟಕ ಮುಗ್ಗರಿಸಿತು. ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಗೋವಾ ವಿರುದ್ಧ ಜ.19ರಿಂದ ಮೈಸೂರಲ್ಲಿ ಆಡಲಿದೆ.
ಸ್ಕೋರ್: ಗುಜರಾತ್ 264 ಹಾಗೂ 219 (ಉಮಾಂಗ್ 57, ಕೌಶಿಕ್ 3-16), ಕರ್ನಾಟಕ 374 ಹಾಗೂ 103/10 (ದೇವದತ್ 31, ಶುಭಾಂಗ್ 27, ಸಿದ್ಧಾರ್ಥ್ 7-42, ವಘೇಲಾ 3-38)