ರಣಜಿ ಕ್ವಾರ್ಟರ್‌ ಫೈನಲ್‌: ಕರ್ನಾಟಕದ ವೇಗಿಗಳ ದಾಳಿಗೆ ವಿದರ್ಭ ದಿಟ್ಟ ಉತ್ತರ

| Published : Feb 24 2024, 02:36 AM IST

ರಣಜಿ ಕ್ವಾರ್ಟರ್‌ ಫೈನಲ್‌: ಕರ್ನಾಟಕದ ವೇಗಿಗಳ ದಾಳಿಗೆ ವಿದರ್ಭ ದಿಟ್ಟ ಉತ್ತರ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ವೇಗಿಗಳು ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲೂ ಅವರಿಂದ ಮೊನಚು ದಾಳಿ ನಿರೀಕ್ಷಿಸಲಾಗಿತ್ತು. ಆದರೆ ವಿದರ್ಭದ ಬ್ಯಾಟರ್‌ಗಳು ರಾಜ್ಯ ತಂಡವನ್ನು ಇನ್ನಿಲ್ಲದಂತೆ ಕಾಡಿದ್ದು, ಮೊದಲ ದಿನ ಉತ್ತಮ ಮೊತ್ತ ಕಲೆಹಾಕಿದ್ದಾರೆ.

ನಾಗ್ಪುರ: ಕರ್ನಾಟಕ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ವಿದರ್ಭ ಮೇಲುಗೈ ಸಾಧಿಸಿದೆ. ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡು ಕರ್ನಾಟಕ ಎಡವಟ್ಟು ಮಾಡಿಕೊಂಡಿದ್ದು, ಮೊದಲು ಬ್ಯಾಟಿಂಗ್‌ ಮಾಡುವ ಸುವರ್ಣಾವಕಾಶ ಪಡೆದ ವಿದರ್ಭ ಮೊದಲ ದಿನದಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 261 ರನ್ ಕಲೆಹಾಕಿದೆ.

ಟೂರ್ನಿಯುದ್ದಕ್ಕೂ ಬೌಲಿಂಗ್‌ನಲ್ಲಿ ಅಭೂತಪೂರ್ವ ಪ್ರದರ್ಶನ ತೋರಿದ್ದ ರಾಜ್ಯ ತಂಡ ನಿರ್ಣಾಯಕ ಘಟ್ಟದಲ್ಲಿ ಸಪ್ಪೆಯಾಯಿತು. ವಿದರ್ಭ ಬ್ಯಾಟರ್‌ಗಳ ಮುಂದೆ ಯಾವುದೇ ಮ್ಯಾಜಿಕ್‌ ನಡೆಸಲು ರಾಜ್ಯಕ್ಕೆ ಸಾಧ್ಯವಾಗಲಿಲ್ಲ.ಆರಂಭಿಕ ಧೃವ್‌ ಶೋರೆ 12ಕ್ಕೆ ಔಟಾದರೂ, 2ನೇ ವಿಕೆಟ್‌ಗೆ ಅಥರ್ವ ತೈಡೆ- ಯಶ್‌ ರಾಥೋಡ್‌ ಬರೋಬ್ಬರಿ 184 ರನ್‌ ಜೊತೆಯಾಟವಾಡಿ ಕರ್ನಾಟಕವನ್ನು ಇನ್ನಿಲ್ಲದಂತೆ ಕಾಡಿದರು. 93 ರನ್‌ ಗಳಿಸಿದ್ದ ಯಶ್‌ ಶತಕದ ಅಂಚಿನಲ್ಲಿ ಎಡವಿದರೆ, ರಕ್ಷಣಾತ್ಮಕ ಆಟದ ಮೂಲಕ ಅತ್ಯಾಕರ್ಷಕ ಶತಕ ಸಿಡಿಸಿದ ಅಥರ್ವ 109 ರನ್‌ ಸಿಡಿಸಿ ಹಾರ್ದಿಕ್‌ ರಾಜ್‌ಗೆ ವಿಕೆಟ್‌ ಒಪ್ಪಿಸಿದರು. ಕರ್ನಾಟಕದ ಮಾಜಿ ಆಟಗಾರ ಕರುಣ್‌ ನಾಯರ್‌ ಔಟಾಗದೆ 30 ರನ್‌ ಗಳಿಸಿದ್ದು, ನಾಯಕ ಅಕ್ಷಯ್ ವಾಡ್ಕರ್‌(02) ಜೊತೆ 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ವಿದ್ವತ್‌, ಕೌಶಿಕ್‌, ಹಾರ್ದಿಕ್‌ ತಲಾ 1 ವಿಕೆಟ್‌ ಪಡೆದರು.ಸ್ಕೋರ್‌: ವಿದರ್ಭ 261/3(ಮೊದಲ ದಿನದಂತ್ಯಕ್ಕೆ)(ಅಥರ್ವ 109, ಯಶ್ 93, ಕೌಶಿಕ್‌ 1-31)

17ರ ಧೀರಜ್‌ ರಾಜ್ಯ ತಂಡಕ್ಕೆ ಪಾದಾರ್ಪಣೆ

ಮಹತ್ವದ ಕ್ವಾರ್ಟರ್ ಪಂದ್ಯಕ್ಕೂ ಮುನ್ನ 17ರ ಧೀರಜ್‌ ಗೌಡ ರಾಜ್ಯ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಿದರು. ಇತ್ತೀಚೆಗಷ್ಟೇ ಕೂಚ್‌ ಬೆಹಾರ್‌ ಅಂಡರ್‌-19 ಕ್ರಿಕೆಟ್‌ನಲ್ಲಿ ರಾಜ್ಯ ತಂಡವನ್ನು ತಮ್ಮ ನಾಯಕತ್ವದಲ್ಲಿ ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಯುವ ಆಲ್ರೌಂಡರ್‌, ಬಳಿಕ ರಾಜ್ಯ ಅಂಡರ್‌-23 ತಂಡದಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ನಾಕೌಟ್‌ ಹಂತದಲ್ಲಿ ರಾಜ್ಯದ ಪರ ರಣಜಿ ಆಡುವ ಅವಕಾಶ ಪಡೆದಿದ್ದು, ಭವಿಷ್ಯದ ತಾರೆ ಎಂದೇ ಕರೆಸಿಕೊಳ್ಳುತ್ತಿದ್ದಾರೆ.ಮುಶೀರ್‌ ಸೆಂಚುರಿಬರೋಡಾ ವಿರುದ್ಧ ಕ್ವಾರ್ಟರ್‌ನಲ್ಲಿ ಮುಂಬೈ ತಂಡ ಮೊದಲ ದಿನ 5 ವಿಕೆಟ್‌ಗೆ 248 ರನ್‌ ಕಲೆಹಾಕಿದೆ. 99ಕ್ಕೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮುಶೀರ್ ಖಾನ್‌ ಔಟಾಗದೆ 128 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು.ಕಿಶೋರ್‌ಗೆ 5 ವಿಕೆಟ್‌ಮತ್ತೊಂದು ಕ್ವಾರ್ಟರ್‌ನಲ್ಲಿ ತಮಿಳುನಾಡು ವಿರುದ್ಧ ಸೌರಾಷ್ಟ್ರ ಮೊದಲ ದಿನವೇ 183ಕ್ಕೆ ಆಲೌಟಾಗಿದೆ. ನಾಯಕ ಸಾಯಿ ಕಿಶೋರ್‌ 5 ವಿಕೆಟ್‌ ಪಡೆದರು. ತಮಿಳುನಾಡು ಮೊದಲ ದಿನದಂತ್ಯಕ್ಕೆ 1 ವಿಕೆಟ್‌ಗೆ 23 ರನ್‌ ಕಲೆಹಾಕಿದೆ.ಮ.ಪ್ರದೇಶ 234ಕ್ಕೆ 9ಇನ್ನೊಂದು ಕ್ವಾರ್ಟರ್‌ನಲ್ಲಿ ಆಂಧ್ರ ವಿರುದ್ಧ ಮಧ್ಯಪ್ರದೇಶ ಮೊದಲ ದಿನದಂತ್ಯಕ್ಕೆ 9 ವಿಕೆಟ್‌ ಕಳೆದುಕೊಂಡು 234 ರನ್‌ ಕಲೆಹಾಕಿದೆ. ಯಶ್ ದುಬೆ 64, ಹಿಮಾಂಶು 49, ಸರನ್ಶ್‌ ಜೈನ್‌ ಔಟಾಗದೆ 41 ರನ್‌ ಗಳಿಸಿದ್ದಾರೆ.