ಸಾರಾಂಶ
ಬೆಂಗಳೂರು : 2 ತಿಂಗಳ ಬಿಡುವಿನ ಬಳಿಕ 2024-25ರ ರಣಜಿ ಟ್ರೋಫಿ ಗುರುವಾರದಿಂದ ಪುನಾರಂಭಗೊಳ್ಳಲಿದೆ. ಕರ್ನಾಟಕ ತಂಡ ‘ಸಿ’ ಗುಂಪಿನ ತನ್ನ 6ನೇ ಪಂದ್ಯದಲ್ಲಿ ಪಂಜಾಬ್ ತಂಡದ ಸವಾಲನ್ನು ಎದುರಿಸಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಇದೇ ಮೊದಲ ಬಾರಿಗೆ ರಣಜಿ ಟ್ರೋಫಿಯನ್ನು ಎರಡು ಚರಣಗಳಲ್ಲಿ ನಡೆಸಲಾಗುತ್ತಿದೆ. ಕಳೆದ 2 ತಿಂಗಳಲ್ಲಿ ಮುಷ್ತಾಕ್ ಅಲಿ ಟಿ20 ಹಾಗೂ ವಿಜಯ್ ಹಜಾರೆ ಏಕದಿನ ಟೂರ್ನಿಗಳು ನಡೆದಿದ್ದವು. ಕೆಲ ದಿನಗಳ ಹಿಂದಷ್ಟೇ ವಿಜಯ್ ಹಜಾರೆ ಟ್ರೋಫಿ ಗೆದ್ದು ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಕರ್ನಾಟಕ, ರಣಜಿ ಟ್ರೋಫಿಯ ಗುಂಪು ಹಂತದಲ್ಲಿ ಬಾಕಿಯಿರುವ 2 ಪಂದ್ಯಗಳನ್ನು ಗೆದ್ದು ನಾಕೌಟ್ ಹಂತ ಪ್ರವೇಶಿಸುವ ವಿಶ್ವಾಸದಲ್ಲಿದೆ. 7ನೇ ಹಾಗೂ ಅಂತಿಮ ಪಂದ್ಯದಲ್ಲಿ ರಾಜ್ಯ ತಂಡಕ್ಕೆ ಹರ್ಯಾಣ ಎದುರಾಗಲಿದೆ. 5 ಪಂದ್ಯಗಳಲ್ಲಿ ಕೇವಲ 1 ಜಯ, 4 ಡ್ರಾ ಕಂಡಿರುವ ಕರ್ನಾಟಕ ಗುಂಪಿನಲ್ಲಿ 4ನೇ ಸ್ಥಾನದಲ್ಲಿದೆ.
ವಿಜಯ್ ಹಜಾರೆಯಲ್ಲಿ ಮಿಂಚಿದ್ದ ಮಯಾಂಕ್ ಅಗರ್‌ವಾಲ್, ಆರ್.ಸ್ಮರಣ್ ಸೇರಿ ದೇವ್‌ದತ್ ಪಡಿಕ್ಕಲ್, ನಿಕಿನ್ ಜೋಸ್‌ರ ಬ್ಯಾಟಿಂಗ್ ಬಲ ರಾಜ್ಯ ತಂಡಕ್ಕೆ ಸಿಗಲಿದೆ. ಬೌಲಿಂಗ್‌ನಲ್ಲಿ ಪ್ರಸಿದ್ಧ್ ಕೃಷ್ಣ, ವಾಸುಕಿ ಕೌಶಿಕ್, ಶ್ರೇಯಸ್ ಗೋಪಾಲ್‌ರ ಅನುಭವ ರಾಜ್ಯಕ್ಕೆ ವರದಾನವಾಗಲಿದೆ.
ಮತ್ತೊಂದೆಡೆ ಪಂಜಾಬ್‌ಗೂ ಇದು ನಿರ್ಣಾಯಕ ಪಂದ್ಯ ಎನಿಸಿದೆ. ಶುಭ್‌ಮನ್ ಗಿಲ್‌ರ ಸೇರ್ಪಡೆ ಸಹಜವಾಗಿಯೇ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಲಿದೆ.