ಈ ಸಾಧನೆ ಮಾಡಿದ 5ನೇ ಭಾರತೀಯ ಎಂಬ ಖ್ಯಾತಿ. ಜಡೇಜಾ ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್‌ಸನ್‌ರ ಹೆಸರಲ್ಲಿದ್ದ ದಾಖಲೆಯೊಂದರನ್ನು ಮುರಿದಿದ್ದಾರೆ.

ನಾಗ್ಪುರ: ಭಾರತದ ತಾರಾ ಆಲ್ರೌಂಡರ್‌ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ವಿಕೆಟ್‌ ಕ್ಲಬ್‌ಗೆ ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ 5ನೇ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 

ಗುರುವಾರ ಇಂಗ್ಲೆಂಡ್‌ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 3 ವಿಕೆಟ್‌ ಪಡೆಯುವ ಮೂಲಕ ಜಡೇಜಾ ಹೊಸ ಮೈಲುಗಲ್ಲು ಸಾಧಿಸಿದರು. 36 ವರ್ಷದ ಜಡೇಜಾ 88 ಟೆಸ್ಟ್‌ ಪಂದ್ಯಗಳಲ್ಲಿ 323, 74 ಅಂ.ರಾ. ಟಿ20ಯಲ್ಲಿ 54 ಹಾಗೂ 198 ಏಕದಿನದಲ್ಲಿ 223 ವಿಕೆಟ್‌ ಪಡೆದಿದ್ದಾರೆ.ಭಾರತದ ದಿಗ್ಗಜ ಸ್ಪಿನ್ನರ್‌, ಕರ್ನಾಟಕದ ಅನಿಲ್‌ ಕುಂಬ್ಳೆ 953 ವಿಕೆಟ್‌ಗಳೊಂದಿಗೆ ಭಾರತೀಯರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆರ್‌.ಅಶ್ವಿನ್‌ 765, ಹರ್ಭಜನ್‌ ಸಿಂಗ್‌ 707, ಕಪಿಲ್‌ ದೇವ್‌ 687 ವಿಕೆಟ್‌ ಪಡೆದಿದ್ದು, ನಂತರದ ಸ್ಥಾನಗಳಲ್ಲಿದ್ದಾರೆ.

ಜಿಮ್ಮಿ ದಾಖಲೆ ಮುರಿದ ಜಡೇಜಾ

ಜಡೇಜಾ ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್‌ಸನ್‌ರ ಹೆಸರಲ್ಲಿದ್ದ ದಾಖಲೆಯೊಂದರನ್ನು ಮುರಿದಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್‌ ಏಕದಿನ ಸರಣಿಯಲ್ಲಿ ಗರಿಷ್ಠ ವಿಕೆಟ್‌ ಕಿತ್ತ ಆಟಗಾರರ ಪಟ್ಟಿಯಲ್ಲಿ ಜಡೇಜಾ 42 ವಿಕೆಟ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಆ್ಯಂಡರ್‌ಸನ್‌ 40 ವಿಕೆಟ್‌ ಪಡೆದಿದ್ದರು.

06ನೇ ಆಟಗಾರ: ಅಂ.ರಾ. ಕ್ರಿಕೆಟ್‌ನಲ್ಲಿ 6000+ ರನ್‌ ಹಾಗೂ 600+ ವಿಕೆಟ್‌ ಕಿತ್ತ ಭಾರತದ 2ನೇ, ವಿಶ್ವದ 6ನೇ ಆಟಗಾರ ಜಡೇಜಾ. ಕಪಿಲ್‌, ವಾಸಿಂ ಅಕ್ರಂ, ಪೊಲಾಕ್‌, ವೆಟೋರಿ, ಶಕೀಬ್‌ ಇತರ ಸಾಧಕರು.