ಸಾರಾಂಶ
ಬೆಂಗಳೂರು: ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಐಪಿಎಲ್‌ನ ಆರ್‌ಸಿಬಿ ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮಾರ್ಗದರ್ಶಕರಾಗಿ ನೇಮಕಗೊಂಡಿದ್ದಾರೆ. ಕಳೆದ ವರ್ಷ ವಿಕೆಟ್ ಕೀಪರ್ ಆಗಿ ತಂಡದಲ್ಲಿದ್ದ ಕಾರ್ತಿಕ್, ಮತ್ತೆ ಆರ್‌ಸಿಬಿ ತಂಡ ಸೇರ್ಪಡೆಗೊಳ್ಳಲಿದ್ದಾರೆ.
ಈ ಬಗ್ಗೆ ಸೋಮವಾರ ಆರ್‌ಸಿಬಿ ಅಧಿಕೃತ ಪ್ರಕಟನೆ ಹೊರಡಿಸಿದೆ. ‘ಕಾರ್ತಿಕ್ ಹೊಸ ಅವತಾರದಲ್ಲಿ ಆರ್‌ಸಿಬಿ ತಂಡಕ್ಕೆ ಮರಳಲಿದ್ದಾರೆ. ಮುಂದಿನ ವರ್ಷದಿಂದ ತಂಡದ ಬ್ಯಾಟಿಂಗ್ ಕೋಚ್, ಮೆಂಟರ್ ಆಗಿರಲಿದ್ದಾರೆ’ ಎಂದಿದೆ.ಕಳೆದ ವರ್ಷ ಆರ್‌ಸಿಬಿ ಪ್ಲೇ-ಆಫ್‌ಗೇರಲು ಕಾರ್ತಿಕ್ ಪ್ರಮುಖ ಪಾತ್ರ ವಹಿಸಿದ್ದರು. 187.36ರ ಸ್ಟ್ರೈಕ್‌ರೇಟ್‌ನಲ್ಲಿ 326 ರನ್ ಕಲೆಹಾಕಿದ್ದರು. ಅವರು ಈ ವರೆಗೂ ಆರ್‌ಸಿಬಿ ಮಾತ್ರವಲ್ಲದೆ ಮುಂಬೈ, ಡೆಲ್ಲಿ, ಪಂಜಾಬ್, ಕೋಲ್ಕತಾ ತಂಡಗಳನ್ನೂ ಪ್ರತಿನಿಧಿಸಿದ್ದು, 257 ಪಂದ್ಯಗಳನ್ನಾಡಿದ್ದಾರೆ. ಅವರು ಭಾರತದ ಪರ 94 ಏಕದಿನ, 26 ಟೆಸ್ಟ್, 60 ಟಿ20 ಪಂದ್ಯಗಳನ್ನಾಡಿದ್ದಾರೆ.
ನೀರಜ್ ಚೋಪ್ರಾ ಪ್ಯಾರಿಸ್ ಡೈಮಂಡ್ ಲೀಗ್‌ಗೆ ಗೈರು
ನವದೆಹಲಿ: ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್, ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಜುಲೈ 7ರಂದು ನಡೆಯಲಿರುವ ಪ್ಯಾರಿಸ್ ಡೈಮಂಡ್ ಲೀಗ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಸಣ್ಣ ಪ್ರಮಾಣದಲ್ಲಿ ಕಾಲಿನ ಗಾಯಕ್ಕೆ ತುತ್ತಾಗಿದ್ದ ನೀರಜ್, ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಮುನ್ನೆಚ್ಚರಿಕಾ ಕ್ರಮವಾಗಿ ಕೂಟಕ್ಕೆ ಗೈರಾಗಲಿದ್ದಾರೆ. ಕಳೆದ ತಿಂಗಳು ಫಿನ್ಲೆಂಡ್‌ನ ಪಾವೊ ನರ್ಮಿ ಕೂಟದಲ್ಲಿ 85.97 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದರು.