ಬೌಲಿಂಗ್‌ನಲ್ಲಿ ಭುವಿ, ಬ್ಯಾಟಿಂಗ್‌ನಲ್ಲಿ ಕೃನಾಲ್ ಮನಮೋಹಕ ಆಟ । ಮುಂಬೈ ವಿರುದ್ಧ ಕೊನೆ ಎಸೆತದಲ್ಲಿ ಗೆದ್ದ ಆರ್‌ಸಿಬಿ ಅಗ್ರಸ್ಥಾನಕ್ಕೆಮುಂಬೈ 7 ವಿಕೆಟ್‌ಗೆ 166, ಭುವಿಗೆ 4 ವಿಕೆಟ್ । ಕೃನಾಲ್ ಏಕಾಂಗಿ ಹೋರಾಟ, ಆರ್‌ಸಿಬಿ 167/8 । 8 ಪಂದ್ಯ ಸೋತು ಮುಂಬೈ ಔಟ್
ರಾಯ್ಪುರ: ಅಭಿಮಾನಿಗಳ ಎದೆಬಡಿತ ಹೆಚ್ಚಾಗುವಂತೆ ಮಾಡಿ, ಕೊನೆ ಎಸೆತದವರೆಗೂ ಪಂದ್ಯವನ್ನು ಸಾಗಿಸಿ ಗೆಲ್ಲುವ ಚಾಳಿ ಆರ್‌ಸಿಬಿಗೆ ಕೆಲ ವರ್ಷಗಳ ಹಿಂದೆ ಇತ್ತು. ಕಳೆದೆರಡು ವರ್ಷಗಳಿಂದ ಭರ್ಜರಿಯಾಗಿಯೇ ಗೆದ್ದು ಅಭ್ಯಾಸ ಮಾಡಿಕೊಂಡಿದ್ದ ಆರ್‌ಸಿಬಿ, ಭಾನುವಾರ ಮತ್ತೆ ಕೊನೆ ಎಸೆತದ ಸೂಪರ್ ಥ್ರಿಲ್ಲರ್ ಕ್ಷಣವನ್ನು ಅಭಿಮಾನಿಗಳಿಗೆ ಒದಗಿಸಿತು. ತನ್ನ 2ನೇ ತವರು ರಾಯ್ಪುರದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿ 2 ವಿಕೆಟ್‌ನಿಂದ ರೋಚಕವಾಗಿ ಗೆದ್ದಿದ್ದು, 11 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. ಮುಂಬೈ 8 ಸೋಲಿನೊಂದಿಗೆ ಅಧಿಕೃತವಾಗಿ ಪ್ಲೇ-ಆಫ್‌ರೇಸ್‌ನಿಂದ ಹೊರಬಿದ್ದಿದೆ.
ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ, ನಮನ್‌ಧೀರ್(47) ಹಾಗೂ ತಿಲಕ್ ವರ್ಮಾ(57) ಹೋರಾಟದಿಂದಾಗಿ 7 ವಿಕೆಟ್‌ಗೆ 166 ರನ್ ಕಲೆಹಾಕಿತು. 3 ಓವರ್‌ಗಳಲ್ಲಿ 28 ರನ್‌ಗೆ 3 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿತ್ತು. ರಿಕೆಲ್ಟನ್ 2, ರೋಹಿತ್ 22, ಸೂರ್ಯಕುಮಾರ್ ಸೊನ್ನೆಗೆ ಔಟಾದರು. ಈ ಮೂವರನ್ನೂ ಭುವನೇಶ್ವರ್ ಪೆವಿಲಿಯನ್‌ಗೆ ಅಟ್ಟಿದರು. ಆದರೆ 4ನೇ ವಿಕೆಟ್‌ಗೆ ಜೊತೆಯಾದ ನಮನ್-ತಿಲಕ್ 82 ರನ್ ಸೇರಿಸಿದರು. ಭುವನೇಶ್ವರ್ ಕೇವಲ 23 ರನ್ ನೀಡಿ 4 ವಿಕೆಟ್ ಪಡೆದರು.
ಕೃನಾಲ್ ಕಮಾಲ್:
ಆರ್‌ಸಿಬಿ ಆರಂಭವೂ ಚೆನ್ನಾಗಿರಲಿಲ್ಲ. ವಿರಾಟ್ ಕೊಹ್ಲಿ ಸೊನ್ನೆಗೆ ಔಟಾದರೆ, ರಜತ್ ಪಾಟೀದಾರ್ 8, ದೇವದತ್ 12 ರನ್‌ಗೆ ವಿಕೆಟ್ ಒಪ್ಪಿಸಿದರು. ಬೆಥೆಲ್ 27 ಎಸೆತಕ್ಕೆ 27 ರನ್ ಗಳಿಸಿದರು. ಈ ವೇಳೆ ತಂಡವನ್ನು ಕಾಪಾಡಿದ್ದು ಕೃನಾಲ್ ಪಾಂಡ್ಯ. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕೃನಾಲ್ ಅಬ್ಬರಿಸಿದರು. 16ನೇ ಓವರ್‌ನಲ್ಲಿ ಜಿತೇಶ್(18), ಟಿಮ್ ಡೇವಿಡ್(0) ಔಟಾದರೂ ಕೃನಾಲ್ ಮೇಲೆ ತಂಡಕ್ಕೆ ಭರವಸೆ ಇತ್ತು. ಆದರೆ 46 ಎಸೆತಕ್ಕೆ 73 ರನ್ ಸಿಡಿಸಿದ್ದ ಕೃನಾಲ್ 18ನೇ ಓವರ್‌ನ ಕೊನೆ ಎಸೆತದಲ್ಲಿ ಔಟಾದರು. ಕೊನೆ 2 ಓವರ್‌ಗೆ 18 ರನ್ ಬೇಕಿತ್ತು. ಬೂಮ್ರಾ ಕೇವಲ 3 ರನ್ ನೀಡಿದರು. ಕೊನೆ ಓವರ್‌ಗೆ 15 ರನ್ ಬೇಕಿದ್ದಾಗ ರಾಜ್ ಬಾವಾ ದಾಳಿಗಿಳಿದರು. ಶೆಫರ್ಡ್‌ರ ವಿಕೆಟ್ ಪಡೆದರೂ ಹಲವು ಹೆಚ್ಚುವರಿ ರನ್ ನೀಡಿದ್ದರಿಂದ ಮುಂಬೈ ಸೋತಿತು. ಕೊನೆ ಎಸೆತಕ್ಕೆ 2 ರನ್ ಬೇಕಿದ್ದಾಗ ರಸಿಕ್ ದಾರ್ ತಂಡವನ್ನು ಗೆಲ್ಲಿಸಿದರು.
ಸ್ಕೋರ್: ಮುಂಬೈ 20 ಓವರಲ್ಲಿ 166/7 (ತಿಲಕ್ 57, ನಮನ್ 47, ಭುವನೇಶ್ವರ್ 4-23), ಆರ್‌ಸಿಬಿ 20 ಓವರಲ್ಲಿ 167/8 (ಕೃನಾಲ್ 73, ಬೆಥೆಲ್ 27, ಕಾರ್ಬಿನ್ 4-26)
ಪಂದ್ಯಶ್ರೇಷ್ಠ: ಭುವನೇಶ್ವರ್ ಕುಮಾರ್
07ನೇ ಜಯ
ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆ 9 ಪಂದ್ಯಗಳ ಪೈಕಿ 7ರಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಮುಂಬೈ 2024ರಲ್ಲಿ ಕೊನೆ ಬಾರಿ ಗೆದ್ದಿತ್ತು.
ಒಂದೇ ದಿನ 2 ತಂಡ
ಪ್ಲೇ-ಆಫ್‌ನಿಂದ ಔಟ್
ಭಾನುವಾರ ಒಂದೇ ದಿನ 2 ತಂಡಗಳು ಪ್ಲೇ-ಆಫ್‌ರೇಸ್‌ನಿಂದ ಹೊರಬಿದ್ದವು. ಮುಂಬೈ ಹಾಗೂ ಲಖನೌ ತಲಾ 8 ಪಂದ್ಯಗಳಲ್ಲಿ ಸೋತಿದ್ದು, ಲೀಗ್ ಹಂತದಲ್ಲೇ ಅಭಿಯಾನ ಕೊನೆಗೊಳಿಸಿದವು. ಡೆಲ್ಲಿ 11ರಲ್ಲಿ 7 ಸೋತಿದ್ದು, ಹೊರಬೀಳುವ ಆತಂಕದಲ್ಲಿದೆ. ಉಳಿದ 7 ತಂಡಗಳು ಪ್ಲೇ-ಆಫ್ ರೇಸ್‌ನಲ್ಲಿ ಉಳಿದುಕೊಂಡಿವೆ.
10 ವರ್ಷ ಬಳಿಕ ಭುವಿ
ಸಿಡಿಸಿದ ಸಿಕ್ಸರ್‌ನಿಂದ
ಆರ್‌ಸಿಬಿಗೆ ಸಿಕ್ತು ಜಯ!
3 ಎಸೆತಕ್ಕೆ 9 ರನ್ ಬೇಕಿದ್ದಾಗ ಸಿಕ್ಸರ್ ಹೊಡೆದು ಆರ್‌ಸಿಬಿಯನ್ನು ಗೆಲುವಿನ ಸನಿಹ ತಂದಿದ್ದು ಭುವನೇಶ್ವರ್. ಈ ಅತ್ಯಮೂಲ್ಯ ಸಿಕ್ಸರ್‌ಗೆ ಅವರು 10 ವರ್ಷ ಕಾದಿದ್ದರು ಎಂಬುದು ವಿಶೇಷ. ಭುವನೇಶ್ವರ್ ಐಪಿಎಲ್‌ನಲ್ಲಿ ಕೇವಲ 4 ಸಿಕ್ಸರ್ ಬಾರಿಸಿದ್ದಾರೆ. 2013, 2015, 2016ರಲ್ಲಿ ಸಿಕ್ಸರ್ ಸಿಡಿಸಿದ್ದರು. ಕಳೆದ 10 ವರ್ಷಗಳಲ್ಲಿ ಮೊದಲ ಬಾರಿ ಸಿಕ್ಸರ್ ಸಿಡಿಸಿದ ಅವರು, ಆರ್‌ಸಿಬಿ ಗೆಲುವಿಗೆ ಕಾರಣರಾದರು.

