ಡಬ್ಲ್ಯುಪಿಎಲ್‌ನಲ್ಲಿ ಫೈನಲ್‌ಗೆ ಎಂಟ್ರಿ: ಆರ್‌ಸಿಬಿಗೆ ಈ ಸಲವಾದ್ರೂ ಸಿಗುತ್ತಾ ಕಪ್‌?

| Published : Mar 16 2024, 01:49 AM IST / Updated: Mar 16 2024, 09:07 AM IST

WPL 2024 RCBW vs UPW highlights Women Royal Challengers Bengaluru beats UP warriors by two runs
ಡಬ್ಲ್ಯುಪಿಎಲ್‌ನಲ್ಲಿ ಫೈನಲ್‌ಗೆ ಎಂಟ್ರಿ: ಆರ್‌ಸಿಬಿಗೆ ಈ ಸಲವಾದ್ರೂ ಸಿಗುತ್ತಾ ಕಪ್‌?
Share this Article
  • FB
  • TW
  • Linkdin
  • Email

ಸಾರಾಂಶ

ಡಬ್ಲ್ಯುಪಿಎಲ್‌ನ ಎಲಿಮಿನೇಟರ್‌ನಲ್ಲಿ ಮುಂಬೈ ವಿರುದ್ಧ ಆರ್‌ಸಿಬಿಗೆ 5 ರನ್ ರೋಚಕ ಗೆಲುವು. ಪೆರ್ರಿ 66 ರನ್‌ಗಳ ಹೋರಾಟದಿಂದ ಆರ್‌ಸಿಬಿ 6 ವಿಕೆಟ್‌ಗೆ 135 ರನ್‌ ಗಳಿಸಿತ್ತು. ಮುಂಬೈ 6 ವಿಕೆಟ್‌ ನಷ್ಟದಲ್ಲಿ 130 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ನವದೆಹಲಿ: ಪುರುಷರಿಗೆ ಸಿಗದಿರುವ ಟ್ರೋಫಿಯನ್ನು ತಾವು ಗೆಲ್ಲುತ್ತೇವೆ ಎಂಬ ಹುಮ್ಮಸ್ಸಿನಲ್ಲಿರುವ ಆರ್‌ಸಿಬಿ ಮಹಿಳಾ ತಂಡ 2ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. 

ಇದರೊಂದಿಗೆ ಮಹಿಳಾ ಐಪಿಎಲ್‌ನಲ್ಲಾದರೂ ಆರ್‌ಸಿಬಿಯ ಟ್ರೋಫಿ ಗೆಲ್ಲುವ ಕನಸು ಸಾಕಾರಗೊಳ್ಳುವ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಶುಕ್ರವಾರ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಸಿಬಿಗೆ 5 ರನ್‌ ರೋಚಕ ಗೆಲುವು ಲಭಿಸಿತು. ಇದರೊಂದಿಗೆ ಮಹಿಳಾ ಐಪಿಎಲ್‌ ಖ್ಯಾತಿಯ ಟೂರ್ನಿಯಲ್ಲಿ ಆರ್‌ಸಿಬಿ ಚೊಚ್ಚಲ ಬಾರಿ ಫೈನಲ್‌ಗೇರಿತು. 

ಸತತ 2ನೇ ಫೈನಲ್‌ ರೀಕ್ಷೆಯಲ್ಲಿದ್ದ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಮುಂಬೈ ಕನಸು ಭಗ್ನಗೊಂಡಿತು.ಅಂಕಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನಿಯಾಗಿದ್ದ ತಂಡಗಳ ನಡುವಿನ ಕಾದಾಟ ರೋಚಕವಾಗಿಯೇ ಮುಕ್ತಾಯಗೊಂಡಿತು. 

ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ತಾರಾ ಬ್ಯಾಟರ್‌ಗಳ ವೈಫಲ್ಯದ ಹೊರತಾಗಿಯೂ ಎಲೈಸಿ ಪೆರ್ರಿಯ ಹೋರಾಟದ ಅರ್ಧಶತಕದದಿಂದಾಗಿ 20 ಓವರಲ್ಲಿ 135 ರನ್‌ ಕಲೆಹಾಕಿತು. 

ಗುರಿ ಸಣ್ಣದಾಗಿದ್ದರೂ ಮುಂಬೈಗೆ ಗೆಲುವು ಸಿಗಲಿಲ್ಲ. 15 ರನ್‌ ಗಳಿಸಿದ್ದ ಹೇಲಿ ಮ್ಯಾಥ್ಯೂಸ್‌ರನ್ನು ಕರ್ನಾಟಕದ ಶ್ರೇಯಾಂಕ ಪಾಟೀಲ್‌ ಪೆವಿಲಿಯನ್‌ಗೆ ಅಟ್ಟಿ ಆರ್‌ಸಿಬಿ ಪಾಳಯದಲ್ಲಿ ಸಂತಸಕ್ಕೆ ಕಾರಣವಾದರು. 

ಯಸ್ತಿಕಾ ಭಾಟಿಯಾ 19ಕ್ಕೆ ವಿಕೆಟ್‌ ಒಪ್ಪಿಸಿದರು. 10.4 ಓವರಲ್ಲಿ 68ಕ್ಕೆ 3 ವಿಕೆಟ್‌ ಕಳೆದುಕೊಂಡ ತಂಡ ಸೋಲಿನತ್ತ ಮುಖ ಮಾಡಿತ್ತು. ಆದರೆ ಹರ್ಮನ್‌ಪ್ರೀತ್ ಕೌರ್‌(33) ಹಾಗೂ ಅಮೇಲಿಯಾ ಕೇರ್‌(ಔಟಾಗದೆ 27) ತಂಡಕ್ಕೆ ಗೆಲುವಿನ ನಿರೀಕ್ಷೆ ಮೂಡಿಸಿದರೂ ರೋಚಕ ಪೈಪೋಟಿಯಲ್ಲಿ ಆರ್‌ಸಿಬಿಗೆ ವಿಜಯಲಕ್ಷ್ಮಿ ಒಲಿಯಿತು. 

ಕೊನೆ 3 ಓವರಲ್ಲಿ 20 ರನ್‌ ಬೇಕಿದ್ದಾಗ ಮೊನಚು ದಾಳಿ ಸಂಘಟಿಸಿದ ಆರ್‌ಸಿಬಿ ಜಯಭೇರಿ ಬಾರಿಸಿತು. ನಿರ್ಣಾಯಕ ಘಟ್ಟದಲ್ಲಿ ಹರ್ಮನ್‌ಪ್ರೀತ್‌ರನ್ನು ಪೆವಿಲಿಯನ್‌ಗೆ ಅಟ್ಟಿದ ಶ್ರೇಯಾಂಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು 4 ಓವರಲ್ಲಿ 16 ರನ್‌ ನೀಡಿ 2 ವಿಕೆಟ್‌ ಕಿತ್ತರು.

ಪೆರ್ರಿ ಹೋರಾಟ: ಮುಂಬೈಗೆ ದೊಡ್ಡ ಗುರಿ ನೀಡುವ ನಿರೀಕ್ಷೆಯೊಂದಿಗೆ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಸ್ಮೃತಿ ಮಂಧನಾರ ಯೋಜನೆ ಆರಂಭದಲ್ಲೇ ತಲೆ ಕೆಳಗಾಯಿತು. 

ಆರಂಭಿಕ ಆಟಗಾರ್ತಿ ಸ್ಮೃತಿ ಕೇವಲ ರನ್‌ಗೆ ವಿಕೆಟ್‌ ಒಪ್ಪಿಸಿದರೆ, ಸೋಫಿ ಡಿವೈನ್‌ ಇನ್ನಿಂಗ್ಸ್‌ ಕೂಡಾ 10ಕ್ಕೆ ಕೊನೆಗೊಂಡಿತು. ಬಳಿಕ ಬಂದ ದಿಶಾ ಕಸಟ್‌ ಸೊನ್ನೆ ಸುತ್ತಿದರು. 

ಹಿಂದಿನ ಪಂದ್ಯಗಳಲ್ಲಿ ಅಬ್ಬರಿಸಿದ್ದ ರಿಚಾ ಘೋಷ್‌ ಕೂಡಾ 14 ರನ್‌ಗೆ ವಿಕೆಟ್‌ ಒಪ್ಪಿಸಿದಾಗ ತಂಡ ಮತ್ತಷ್ಟು ಸಂಕಷ್ಟಕ್ಕೊಳಗಾಯಿತು. ಆದರೆ ಪೆರ್ರಿ ಹೋರಾಟ ಬಿಡಲಿಲ್ಲ. 

ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಪೆರ್ರಿ 50 ಎಸೆತಗಳಲ್ಲಿ 66 ರನ್‌ ಸಿಡಿಸಿದರು. 12 ಓವರಲ್ಲಿ 57ಕ್ಕೆ 4 ವಿಕೆಟ್‌ ಕಳೆದುಕೊಂಡಿದ್ದ ತಂಡ ಕೊನೆ 8 ಓವರಲ್ಲಿ 78 ರನ್‌ ಸೇರಿಸಿತು.

ಸ್ಕೋರ್: ಆರ್‌ಸಿಬಿ 20 ಓವರಲ್ಲಿ 135/6(ಪೆರ್ರಿ 66, ವೇರ್‌ಹ್ಯಾಮ್‌ 18, ಮ್ಯಾಥ್ಯೂಸ್‌ 2-18, ಬ್ರಂಟ್‌ 2-18), ಮುಂಬೈ 20 ಓವರಲ್ಲಿ 130/6 (ಹರ್ಮನ್‌ಪ್ರೀತ್‌ 33, ಅಮೇಲಿಯಾ 27*, ಶ್ರೇಯಾಂಕ 2-16)

ನಾಳೆ ಡೆಲ್ಲಿ vs ಆರ್‌ಸಿಬಿ ಪ್ರಶಸ್ತಿ ಫೈಟ್‌

ಈ ಬಾರಿ ಫೈನಲ್‌ ಪಂದ್ಯ ಭಾನುವಾರ ನಡೆಯಲಿದ್ದು, ಚೊಚ್ಚಲ ಪ್ರಶಸ್ತಿಗಾಗಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಸೆಣಸಾಡಲಿವೆ. ಕಳೆದ ವರ್ಷದ ಟೂರ್ನಿಯಲ್ಲಿ ಡೆಲ್ಲಿಯನ್ನು ಮಣಿಸಿ ಮುಂಬೈ ಟ್ರೋಫಿ ಗೆದ್ದಿತ್ತು. 

ಈ ಬಾರಿ ಡೆಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿ ಲೀಗ್‌ ಹಂತದಿಂದ ನೇರವಾಗಿ ಫೈನಲ್‌ಗೇರಿದ್ದು, ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದೆ.

02ನೇ ಗೆಲುವು: ಆರ್‌ಸಿಬಿಗೆ ಮುಂಬೈ ವಿರುದ್ಧ ಡಬ್ಲ್ಯುಪಿಎಲ್‌ನಲ್ಲಿ 5 ಪಂದ್ಯಗಳಲ್ಲಿ ಇದು 2ನೇ ಗೆಲುವು. ಮೊದಲ 3 ಮುಖಾಮುಖಿಗಳಲ್ಲಿ ಮುಂಬೈ ಗೆದ್ದಿತ್ತು.