ಸಾರಾಂಶ
ಬೆಂಗಳೂರು : ಕಳೆದ 17 ವರ್ಷಗಳಿಂದಲೂ ಟ್ರೋಫಿ ಗೆಲ್ಲಲು ಕಾಯುತ್ತಿರುವ ಆರ್‌ಸಿಬಿ ಈ ಬಾರಿ ಐಪಿಎಲ್‌ನಲ್ಲಿ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲಿದೆ. ಇದರ ಪೂರ್ವಭಾವಿಯಾಗಿ ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಆರ್‌ಸಿಬಿ ತನ್ನ ಹೊಸ ಜೆರ್ಸಿ ಬಿಡುಗಡೆಗೊಳಿಸಿತು.
ಸಂಜೆ 4 ಗಂಟೆಗೆ ಆರ್‌ಸಿಬಿ ತಂಡದ ಎಲ್ಲಾ ಆಟಗಾರರು ಅಭ್ಯಾಸ ಆರಂಭಿಸಿದರು. ಬಳಿಕ ಸಂಗೀತ ಕಾರ್ಯಕ್ರಮ ನೆರವೇರಿತು. ಖ್ಯಾತ ಗಾಯಕರಾದ ಅಲೋಕ್, ಸಂಜಿತ್ ಹೆಗ್ಡೆ, ಐಶ್ವರ್ಯಾ ರಂಗರಾಜನ್, ಹನುಮಾನ್‌ಕೈಂಡ್ ಸೇರಿದಂತೆ ಹಲವರು ಸಂಗೀತ ಪ್ರದರ್ಶನ ನೀಡಿದರು.
ಅಪ್ಪು, ಕನ್ನಡ ಕಲರವ : ಕಾರ್ಯಕ್ರಮದುದ್ದಕ್ಕೂ ಕ್ರೀಡಾಂಗಣದಲ್ಲಿ ಪುನೀತ್ ರಾಜ್‌ಕುಮಾರ್ ಭಾವಚಿತ್ರ, ಹಾಡುಗಳೇ ಮೇಳೈಸಿದವು. ನೃತ್ಯಪಟುಗಳು ಕನ್ನಡದ ಧ್ವಜ ಹಿಡಿದು, ಕನ್ನಡ ಹಾಡು ಹಾಡುತ್ತಾ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು. ಅಪಾರ ಪ್ರಮಾಣದಲ್ಲಿ ನೆರೆದಿದ್ದ ಅಭಿಮಾನಿಗಳು ಆರ್‌ಸಿಬಿ...ಆರ್‌ಸಿಬಿ ಘೋಷಣೆ ಕೂಗಿ ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸಿದರು.
ರಜತ್ ದೀರ್ಘಕಾಲ ನಾಯಕ: ವಿರಾಟ್
ಸಮಾರಂಭದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ‘ರಜತ್ ಪಾಟೀದಾರ್ ಆರ್‌ಸಿಬಿಯ ದೀರ್ಘ ಕಾಲದ ನಾಯಕ’ ಎಂದರು. ರಜತ್ ಆರ್‌ಸಿಬಿಯನ್ನು ಮುನ್ನಡೆಸುವ ದೊಡ್ಡ ಹೊಣೆಗಾರಿಕೆ ಪಡೆದಿದ್ದಾರೆ. ಚಾಂಪಿಯನ್ ಎನಿಸಿಕೊಳ್ಳುವ ಎಲ್ಲಾ ಅರ್ಹತೆಗಳೂ ಅವರಲ್ಲಿವೆ ಎಂದರು. ಈ ವೇಳೆ ರಜತ್ ಕೂಡಾ ಮಾತನಾಡಿದರು. ‘ಕೊಹ್ಲಿ, ಡಿ ವಿಲಿಯರ್ಸ್, ಕ್ರಿಸ್ ಗೇಲ್‌ರಂತಹ ದಿಗ್ಗಜರು ಆರ್‌ಸಿಬಿ ಪರ ಆಡಿದ್ದಾರೆ. ಅವರು ಆಡುವುದನ್ನು ನೋಡಿ ಬೆಳೆದಿದ್ದೇನೆ. ಈಗ ಅದೇ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದು ದೊಡ್ಡ ಗೌರವ’ ಎಂದರು.