ಆರ್‌ಸಿಬಿಗೆ ತವರಲ್ಲಿ ಹ್ಯಾಟ್ರಿಕ್‌ ಸೋಲು! ಮಳೆ ಬಾಧಿತ ಪಂದ್ಯದಲ್ಲಿ ಮುಳುಗಿದ ಬೆಂಗಳೂರು

| N/A | Published : Apr 19 2025, 08:02 AM IST

RCB vs PBKS photos moments

ಸಾರಾಂಶ

ಆರ್‌ಸಿಬಿ ಈ ವರ್ಷ ತವರಿನಲ್ಲಿ ಮೊದಲ ಜಯಕ್ಕಾಗಿ ಮತ್ತಷ್ಟು ದಿನ ಕಾಯಬೇಕಿದೆ. ಶುಕ್ರವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ ಮಳೆ ಬಾಧಿತ ಪಂದ್ಯದಲ್ಲಿ, ಆರ್‌ಸಿಬಿಗೆ 5 ವಿಕೆಟ್‌ ಸೋಲು ಎದುರಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ 3ನೇ ಪಂದ್ಯದಲ್ಲೂ ಬ್ಯಾಟಿಂಗ್‌ ವೈಫಲ್ಯ ಕಂಡ ಆರ್‌ಸಿಬಿ, 3ನೇ ಸೋಲುಂಡಿತು.

ಸ್ಪಂದನ್‌ ಕಣಿಯಾರ್‌

  ಬೆಂಗಳೂರು : ಆರ್‌ಸಿಬಿ ಈ ವರ್ಷ ತವರಿನಲ್ಲಿ ಮೊದಲ ಜಯಕ್ಕಾಗಿ ಮತ್ತಷ್ಟು ದಿನ ಕಾಯಬೇಕಿದೆ. ಶುಕ್ರವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ ಮಳೆ ಬಾಧಿತ ಪಂದ್ಯದಲ್ಲಿ, ಆರ್‌ಸಿಬಿಗೆ 5 ವಿಕೆಟ್‌ ಸೋಲು ಎದುರಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ 3ನೇ ಪಂದ್ಯದಲ್ಲೂ ಬ್ಯಾಟಿಂಗ್‌ ವೈಫಲ್ಯ ಕಂಡ ಆರ್‌ಸಿಬಿ, 3ನೇ ಸೋಲುಂಡಿತು.

ಮಳೆಯಿಂದಾಗಿ ಪಂದ್ಯ 2 ಗಂಟೆ ತಡವಾಗಿ ಆರಂಭಗೊಂಡಿತು. ಪಂದ್ಯವನ್ನು ತಲಾ 14 ಓವರ್‌ಗೆ ಕಡಿತಗೊಳಿಸಲಾಯಿತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಇಳಿಸಲ್ಪಟ್ಟ ಆರ್‌ಸಿಬಿ 14 ಓವರಲ್ಲಿ 9 ವಿಕೆಟ್‌ಗೆ 95 ರನ್‌ ಗಳಿಸಿತು. ಪಂಜಾಬ್‌ 12.1 ಓವರಲ್ಲಿ 5 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ಆರ್‌ಸಿಬಿ ಕಳಪೆ ಬ್ಯಾಟಿಂಗ್‌: 14 ಓವರ್‌ ಪಂದ್ಯವಾಗಿದ್ದರಿಂದ ಮೊದಲ 4 ಓವರ್‌ ಮಾತ್ರ ಪವರ್‌-ಪ್ಲೇ ಇತ್ತು. 4 ಬೌಲರ್‌ಗಳು ತಲಾ 3, ಒಬ್ಬ ಬೌಲರ್‌ 2 ಓವರ್‌ ಬೌಲ್‌ ಮಾಡಬಹುದಿತ್ತು. ಆರ್‌ಸಿಬಿ ಪವರ್‌-ಪ್ಲೇನಲ್ಲೇ ಥಂಡಾ ಹೊಡೆಯಿತು. ಫಿಲ್‌ ಸಾಲ್ಟ್‌ ಹಾಗೂ ವಿರಾಟ್‌ ಕೊಹ್ಲಿ ಇಬ್ಬರಿಗೂ ಅರ್ಶ್‌ದೀಪ್‌ ಪೆವಿಲಿಯನ್‌ ದಾರಿ ತೋರಿಸಿದರೆ, ಲಿವಿಂಗ್‌ಸ್ಟೋನ್‌ ಮತ್ತೆ ವೈಫಲ್ಯ ಅನುಭವಿಸಿದರು. 4 ಓವರ್‌ ಮುಕ್ತಾಯಕ್ಕೆ ಆರ್‌ಸಿಬಿ 26ಕ್ಕೆ 3 ವಿಕೆಟ್‌ ಕಳೆದುಕೊಂಡಿತು.

ಆ ಬಳಿಕ, ಆರ್‌ಸಿಬಿ ಪರ 8 ವರ್ಷವಾಡಿದ್ದ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತಿಹೆಚ್ಚು ಐಪಿಎಲ್‌ ವಿಕೆಟ್‌ ಕಬಳಿಸಿರುವ ದಾಖಲೆ ಹೊಂದಿರುವ ಯಜುವೇಂದ್ರ ಚಹಲ್‌, ಆರ್‌ಸಿಬಿ ಬ್ಯಾಟರ್‌ಗಳಿಗೆ ನೀರು ಕುಡಿಸಿದರು. ನಾಯಕ ರಜತ್‌ ಪಾಟೀದಾರ್‌ ಹಾಗೂ ಜಿತೇಶ್‌ ಶರ್ಮಾರನ್ನು ಔಟ್‌ ಮಾಡಿ, ಆರ್‌ಸಿಬಿ ಮಧ್ಯಮ ಕ್ರಮಾಂಕದ ಬೆನ್ನೆಲುಬು ಮುರಿದರು. ಯಾನ್ಸನ್‌, ಬಾರ್ಟ್‌ಲೆಟ್‌ರಿಂದಲೂ ಉತ್ತಮ ಬೌಲಿಂಗ್‌ ಪ್ರದರ್ಶನ ಮೂಡಿಬಂತು.

41 ರನ್‌ಗೆ 6 ವಿಕೆಟ್‌ ಕಳೆದುಕೊಂಡಾಗ, ಇಂಪ್ಯಾಕ್ಟ್‌ ಆಟಗಾರನಾಗಿ ಮನೋಜ್‌ ಭಾಂಡಗೆಯನ್ನು ಕಣಕ್ಕಿಳಿಸಲಾಯಿತು. ಆದರೆ ಕನ್ನಡಿಗ ಮನೋಜ್‌ (1) ವಿವಾದಾತ್ಮಕ ಎಲ್‌ಬಿ ತೀರ್ಪಿಗೆ ಬಲಿಯಾದಾಗ ತಂಡದ ಮೊತ್ತ 42ಕ್ಕೆ 7. ಆರ್‌ಸಿಬಿ 50 ರನ್‌ ದಾಟುವುದೂ ಕಷ್ಟ ಎನ್ನುವ ಪರಿಸ್ಥಿತಿಯಲ್ಲಿದ್ದಾಗ ಟಿಮ್‌ ಡೇವಿಡ್‌ರ ಸಾಹಸ ತಂಡದ ಮಾನ ಉಳಿಸಿತು. 26 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ ಡೇವಿಡ್‌ 50 ರನ್‌ ಗಳಿಸಿ ಔಟಾಗದೆ ಉಳಿದರು. ಇನ್ನಿಂಗ್ಸ್‌ನ ಕೊನೆ 3 ಎಸೆತದಲ್ಲಿ ಡೇವಿಡ್‌ 3 ಸಿಕ್ಸರ್‌ ಸಿಡಿಸಿದರು. ಡೇವಿಡ್‌ (50), ರಜತ್‌ (23) ಮಾತ್ರ ಎರಡಂಕಿ ಮೊತ್ತ ದಾಟಿದರು. ತಂಡ ಗಳಿಸಿದ 95 ರನ್‌ಗಳಲ್ಲಿ ಇವರಿಬ್ಬರ ಕೊಡುಗೆಯೇ 83 ರನ್‌.

ಸುಲಭ ಗುರಿ ಬೆನ್ನತ್ತಿದ ಪಂಜಾಬ್‌, ಒಂದು ಹಂತದಲ್ಲಿ ಸೋಲಿನತ್ತ ಮುಖ ಮಾಡಿದಂತೆ ಕಾಣುತಿತ್ತು. ಡಾಟ್‌ ಬಾಲ್‌ಗಳು ಹೆಚ್ಚುತ್ತಿದ್ದವು. ಆದರೆ ನೇಹಲ್‌ ವಧೇರಾ, ಸತತ ಬೌಂಡರಿಗಳನ್ನು ಸಿಡಿಸಿ ತಂಡದ ಮೇಲಿದ್ದ ಒತ್ತಡ ಇಳಿಸಿದರು. ಔಟಾಗದೆ 33 ರನ್‌ ಗಳಿಸಿ, ಯಾವುದೇ ಆತಂಕವಿಲ್ಲದೆ ತಂಡವನ್ನು ಜಯದ ದಡ ಸೇರಿಸಿದರು.

ಸ್ಕೋರ್‌: ಆರ್‌ಸಿಬಿ 14 ಓವರಲ್ಲಿ 95/9 (ಡೇವಿಡ್‌ 50*, ರಜತ್‌ 23, ಯಾನ್ಸನ್‌ 3-10, ಚಹಲ್‌ 3-11), ಪಂಜಾಬ್ 12.1 ಓವರಲ್ಲಿ 98/5 (ನೇಹಲ್‌ 33*, ಪ್ರಿಯಾನ್ಶ್‌ 16, ಹೇಜಲ್‌ವುಡ್‌ 3-14)