ಸಾರಾಂಶ
ಈ ಬಾರಿ ಐಪಿಎಲ್‌ನಲ್ಲಿ ತವರಿನ 2 ಪಂದ್ಯಗಳಲ್ಲೂ ಸೋತರೂ, ತವರಿನಾಚೆ ಕ್ರೀಡಾಂಗಣಗಳಲ್ಲಿ ಆರ್‌ಸಿಬಿ ಗೆಲುವಿನ ಜೈತ್ರಯಾತ್ರೆ ಮುಂದುವರಿದಿದೆ. ಕೋಲ್ಕತಾ, ಚೆನ್ನೈ ಹಾಗೂ ಮುಂಬೈ ಬಳಿಕ ಜೈಪುರದಲ್ಲೂ ಬೆಂಗಳೂರು ತಂಡ ಜಯಭೇರಿ ಮೊಳಗಿಸಿದೆ.
ಜೈಪುರ: ಈ ಬಾರಿ ಐಪಿಎಲ್‌ನಲ್ಲಿ ತವರಿನ 2 ಪಂದ್ಯಗಳಲ್ಲೂ ಸೋತರೂ, ತವರಿನಾಚೆ ಕ್ರೀಡಾಂಗಣಗಳಲ್ಲಿ ಆರ್‌ಸಿಬಿ ಗೆಲುವಿನ ಜೈತ್ರಯಾತ್ರೆ ಮುಂದುವರಿದಿದೆ. ಕೋಲ್ಕತಾ, ಚೆನ್ನೈ ಹಾಗೂ ಮುಂಬೈ ಬಳಿಕ ಜೈಪುರದಲ್ಲೂ ಬೆಂಗಳೂರು ತಂಡ ಜಯಭೇರಿ ಮೊಳಗಿಸಿದೆ. ಭಾನುವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಅಮೋಘ ಆಟ ಪ್ರದರ್ಶಿಸಿದ ಆರ್‌ಸಿಬಿ, 9 ವಿಕೆಟ್ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.
ಆಡಿರುವ 6 ಪಂದ್ಯಗಳ ಪೈಕಿ 4 ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. 6 ಪಂದ್ಯಗಳಲ್ಲಿ 4ನೇ ಸೋಲು ಕಂಡ ರಾಯಲ್ಸ್ 7ನೇ ಸ್ಥಾನಕ್ಕೆ ಕುಸಿದಿದೆ.
ಸತತ 4 ಪಂದ್ಯಗಳಲ್ಲಿ ಟಾಸ್ ಸೋತಿದ್ದ ಆರ್‌ಸಿಬಿಗೆ ಈ ಬಾರಿ ಅದೃಷ್ಟ ಕೈಹಿಡಿಯಿತು. ಟಾಸ್ ಜಯಿಸಿದ ರಜತ್ ಪಾಟೀದಾರ್ ಫೀಲ್ಡಿಂಗ್ ಆಯ್ದುಕೊಂಡರು. ಬ್ಯಾಟಿಂಗ್ ಕಷ್ಟವಾಗಿದ್ದ ಪಿಚ್‌ನಲ್ಲಿ ಉತ್ತಮವಾಗಿ ಆಡಿದ ರಾಜಸ್ಥಾನ 4 ವಿಕೆಟ್‌ಗೆ 173 ರನ್ ಕಲೆಹಾಕಿತು. ಈ ಸ್ಕೋರ್ ಜೈಪುರ ಪಿಚ್‌ನಲ್ಲಿ ದೊಡ್ಡ ಮೊತ್ತ. ಆದರೆ ಫಿಲ್ ಸಾಲ್ಟ್ ಅಬ್ಬರ ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟಿತು. ಪವರ್-ಪ್ಲೇನಲ್ಲೇ ರಾಜಸ್ಥಾನ ಕೈಯಿಂದ ಗೆಲುವು ಕಸಿದ ಆರ್‌ಸಿಬಿ, 17.3 ಓವರ್‌ಗಳಲ್ಲಿ ಗುರಿ ತಲುಪಿತು.
ಪಿಚ್ ನಿಧಾನಗತಿ ವರ್ತಿಸುತ್ತಿದ್ದ ಕಾರಣ ಆರ್‌ಸಿಬಿ ಸ್ಫೋಟಕ ಆರಂಭ ಬೇಕಿತ್ತು. ಇದರ ಹೊಣೆಯನ್ನು ಸಾಲ್ಟ್ ಹೊತ್ತುಕೊಂಡರು. ಕೊಹ್ಲಿ ಜೊತೆಗೂಡಿ ಮೊದಲ ವಿಕೆಟ್‌ಗೆ 8.4 ಓವರ್‌ಗಳಲ್ಲಿ 92 ರನ್ ಸಿಡಿಸಿದರು. ಅವರು ಕೇವಲ 33 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ 65 ರನ್ ಬಾರಿಸಿ ಔಟಾದರು. ಆದರೆ ಪಂದ್ಯ ಅದಾಗಲೇ ಆರ್‌ಸಿಬಿ ಕಡೆ ವಾಲಿತ್ತು.ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ 39 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಅವರು 45 ಎಸೆತಗಳಲ್ಲಿ 62 ರನ್ ಸಿಡಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಕರ್ನಾಟಕ ಬ್ಯಾಟರ್ ದೇವದತ್ ಪಡಿಕ್ಕಲ್ 28 ಎಸೆತಗಳಲ್ಲಿ 40 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.
ಜೈಸ್ವಾಲ್ ಹೋರಾಟ: ಇದಕ್ಕೂ ಮುನ್ನ ಸಂಜು ಸ್ಯಾಮ್ಸನ್ ಔಟಾದಾಗಲೇ ಈ ಪಿಚ್‌ನಲ್ಲಿ ಬ್ಯಾಟಿಂಗ್ ಕಷ್ಟ ಎಂಬುದು ಸ್ಪಷ್ಟವಾಗಿತ್ತು. ಆದರೆ ಯಶಸ್ವಿ ಜೈಸ್ವಾಲ್ ತಂಡಕ್ಕೆ ಆಸರೆಯಾದರು. ಕ್ರೀಸ್ ಕಚ್ಚಿ ಆಡಿದ ಅವರು 47 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್‌ಗಳೊಂದಿಎಗ 75 ರನ್ ಬಾರಿಸಿದರು. ರಿಯಾನ್ ಪರಾಗ್ 30, ಧ್ರುವ್ ಜುರೆಲ್ 35 ರನ್ ಗಳಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.
ಸ್ಕೋರ್: ರಾಜಸ್ಥಾನ 20 ಓವರಲ್ಲಿ 173/4 (ಜೈಸ್ವಾಲ್ 75, ಜುರೆಲ್ ಔಟಾಗದೆ 35, ಹೇಜಲ್‌ವುಡ್ 1-26), ಆರ್‌ಸಿಬಿ 17.3 ಓವರಲ್ಲಿ 175/1 (ಸಾಲ್ಟ್ 65, ಕೊಹ್ಲಿ ಔಟಾಗದೆ 62, ದೇವದತ್ 40, ಕಾರ್ತಿಕೇಯ 1-25)
ಪಂದ್ಯಶ್ರೇಷ್ಠ: ಫಿಲ್ ಸಾಲ್ಟ್
ದೇವದತ್ 1000 ರನ್:
7ನೇ ಆರ್‌ಸಿಬಿ ಬ್ಯಾಟರ್
ಐಪಿಎಲ್‌ನಲ್ಲಿ ಆರ್‌ಸಿಬಿ ಪರ 1000 ರನ್ ಪೂರ್ಣಗೊಳಿಸಿದ 7ನೇ ಆಟಗಾರ ಎಂಬ ಹೆಗ್ಗಳಿಕೆಗೆ ದೇವದತ್ ಪಡಿಕ್ಕಲ್ ಪಾತ್ರರಾಗಿದ್ದಾರೆ. ಫ್ರಾಂಚೈಸಿ ಪರ ಕೊಹ್ಲಿ 8252, ವಿಲಿಯರ್ಸ್ 4491, ಕ್ರಿಸ್ ಗೇಲ್ 3163, ಡು ಪ್ಲೆಸಿ 1636, ಮ್ಯಾಕ್ಸ್‌ವೆಲ್ 1266, ಜ್ಯಾಕ್ ಕ್ಯಾಲಿಸ್ 1132 ಹಾಗೂ ದೇವದತ್ 1003 ರನ್ ಗಳಿಸಿದ್ದಾರೆ. ರಜತ್ 985 ರನ್ ಬಾರಿಸಿದ್ದಾರೆ.