ಸಾರಾಂಶ
ನಟ ರಿಷಭ್ ಶೆಟ್ಟಿಯ ಪ್ರೊಮೋ ಮೂಲಕ ಇದರ ಸುಳಿವು ನೀಡಿದ್ದಾರೆ. ಮಾ.19ರಂದು ನಡೆಯಲಿರುವ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಫ್ರಾಂಚೈಸಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ.
ಬೆಂಗಳೂರು: 17ನೇ ಆವೃತ್ತಿ ಐಪಿಎಲ್‌ಗೂ ಮುನ್ನ ಆರ್‌ಸಿಬಿ ತಂಡ ತನ್ನ ಹೆಸರಿನಲ್ಲಿ ಬದಲಾವಣೆ ಮಾಡಲಿದೆಯೇ ಎಂಬ ಕುತೂಹಲ ತಂಡದ ಅಭಿಮಾನಿಗಳಲ್ಲಿ ಮನೆ ಮಾಡಿದೆ. ತಂಡದ ಹೆಸರಲ್ಲಿರುವ Bangalore ಬದಲು Bengaluru ಎಂದು ಬದಲಿಸುವ ಬಗ್ಗೆ ಫ್ರಾಂಚೈಸಿಯು ಸುಳಿವು ನೀಡಿದೆ.ಸ್ಯಾಂಡಲ್‌ವುಡ್ ನಟ, ನಿರ್ದೇಶಕ, ‘ಕಾಂತಾರ’ ಖ್ಯಾತಿಯ ರಿಷಭ್ ಶೆಟ್ಟಿ ಹೊಸ ಸುಳಿವೊಂದನ್ನು ನೀಡಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ರಿಷಭ್ ಶೆಟ್ಟಿ ಅವರು ನಟಿಸಿರುವ ಪ್ರೊಮೋ ವಿಡಿಯೋವನ್ನು ಬುಧವಾರ ಫ್ರಾಂಚೈಸಿ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಮೂರು ಕೋಣಗಳು ಕಂಡು ಬರುತ್ತವೆ. ಒಂದರ ಮೇಲೆ ರಾಯಲ್, ಮತ್ತೊಂದರ ಮೇಲೆ ಚಾಲೆಂಜರ್ಸ್ ಮತ್ತು 3ನೇ ಕೋಣದ ಮೇಲೆ ಬ್ಯಾಂಗಳೂರ್ ಎಂದು ಬರೆಯಲಾಗಿದೆ. ರಿಷಭ್ 2 ಕೋಣಗಳನ್ನು ದಾಟಿ ಬ್ಯಾಂಗಳೂರ್ ಎಂದು ಬರೆದಿರುವ 3ನೇ ಕೋಣದ ಬಳಿ ಬಂದು, ಇದು ಬೇಡ, ಭಟ್ರೆ ತಗೊಂಡು ಹೋಗಿ ಎಂದು ಹೇಳುತ್ತಾರೆ. ಕೊನೆಯಲ್ಲಿ ಅರ್ಥ ಆಯ್ತಾ ಎಂದು ಪ್ರಶ್ನಿಸುತ್ತಾರೆ.ಈ ವಿಡಿಯೋ ವೀಕ್ಷಿಸಿದವರು ಆರ್‌ಸಿಬಿ ತನ್ನ ಹೆಸರನ್ನು ಬದಲಾವಣೆ ಮಾಡಲಿದೆ ಎಂದೇ ವಿಶ್ಲೇಷಿಸುತ್ತಿದ್ದಾರೆ. ಆದರೆ ಈ ಬಗ್ಗೆ ಆರ್‌ಸಿಬಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಮಾ.19ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ತಂಡದ ಹೊಸ ಹೆಸರನ್ನು ಪ್ರಕಟಿಸಲು ಫ್ರಾಂಚೈಸಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.