ಸಾರಾಂಶ
ಭಾರತೀಯ ಕ್ರೀಡಾ ಪ್ರಾಧಿಕಾರ ಬಿಡುಗಡೆ ಮಾಡಿರುವ ಆರ್ಥಿಕ ನೆರವಿನ ಅಂಕಿ-ಅಂಶಗಳ ಬಗ್ಗೆ ಅಶ್ವಿನಿ ಪೊನ್ನಪ್ಪ ಕಿಡಿ. ನನಗೆ ಸೂಕ್ತ ಕೋಚ್ ಸಹ ಒದಗಿಸಿಲ್ಲ. ಇನ್ನು ಒಂದೂವರೆ ಕೋಟಿ ಎಲ್ಲಿಂದ ಬರುತ್ತೆ ಎಂದ ಕರ್ನಾಟಕದ ತಾರಾ ಶಟ್ಲರ್.
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ತಯಾರಿಗೆ ಕೇಂದ್ರ ಕ್ರೀಡಾ ಸಚಿವಾಲಯದಿಂದ ನೀಡಲಾಗಿದೆ ಎನ್ನಲಾದ ಆರ್ಥಿಕ ನೆರವಿನ ಬಗ್ಗೆ ತಾರಾ ಶಟ್ಲರ್ ಅಶ್ವಿನಿ ಪೊನ್ನಪ್ಪ ಕಿಡಿಕಾಡಿದ್ದಾರೆ.
ಇತ್ತೀಚೆಗೆ ಭಾರತೀಯ ಕ್ರೀಡಾಪಟುಗಳಿಗೆ ನೀಡಿದ ಆರ್ಥಿಕ ನೆರವಿನ ಕುರಿತು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಅಶ್ವಿನಿಗೆ 1.5 ಕೋಟಿ ರು. ಕೊಟ್ಟಿರುವುದಾಗಿ ತಿಳಿಸಲಾಗಿತ್ತು. ಆದರೆ ಇದು ಸುಳ್ಳು ಎಂದು ಅಶ್ವಿನಿ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.‘ಈ ಸುದ್ದಿ ನೋಡಿ ನನಗೆ ಆಘಾತವಾಗಿದೆ. ಇಷ್ಟೊಂದು ಪ್ರಮಾಣದ ಹಣವನ್ನು ನನಗೆ ನೀಡಿರುವುದಾಗಿ ದೇಶಕ್ಕೆ ತಿಳಿಸುವುದು ಹಾಸ್ಯಸ್ಪದ. ನನಗೆ ಸೂಕ್ತ ಕೋಚ್ ಸಹ ಒದಗಿಸಲಿಲ್ಲ. ನನ್ನ ಟ್ರೈನರ್‌ಗೆ ಸ್ವಂತ ಹಣದಿಂದ ವೇತನ ನೀಡುತ್ತಿದ್ದೇನೆ’ ಎಂದು ಅಶ್ವಿನಿ ತಿಳಿಸಿದ್ದಾರೆ.