ಕರ್ನಾಟಕದ ಕ್ರೀಡಾ ಸಾಧಕರಿಗೆ ಇಂದು ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಹುದ್ದೆಯ ನೇಮಕಾತಿ ಪತ್ರ

| Published : Aug 04 2024, 01:21 AM IST / Updated: Aug 04 2024, 04:12 AM IST

ಸಾರಾಂಶ

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹುದ್ದೆ. ರಾಜ್ಯದ ಅಥ್ಲೀಟ್‌ಗಳಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೌಕರಿ ನೀಡುವುದಾಗಿ ರಾಜ್ಯ ಸರ್ಕಾರ ಕಳೆದ ವರ್ಷ ಮಾರ್ಚ್‌ನಲ್ಲೇ ಅಧಿಸೂಚನೆ ಹೊರಡಿಸಿತ್ತು.

ಬೆಂಗಳೂರು: ಜಾಗತಿಕ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿರುವ ಕರ್ನಾಟಕದ ಕ್ರೀಡಾಪಟುಗಳಿಗೆ ಭಾನುವಾರ ರಾಜ್ಯ ಸರ್ಕಾರ ನೇಮಕಾತಿ ಪತ್ರ ವಿತರಿಸಲಿದೆ. ಸಿಎಂ ಅಧಿಕೃತ ನಿವಾಸ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕಾತಿ ಪತ್ರ ವಿತರಿಸಲಿದ್ದಾರೆ.

ಪ್ಯಾರಾಲಿಂಪಿಕ್ಸ್‌ ಚಿನ್ನ ಗೆದ್ದಿರುವ ರಾಜ್ಯದ ಏಕೈಕ ಅಥ್ಲೀಟ್‌ ಎಚ್‌.ಎನ್‌.ಗಿರೀಶ್‌, ಪ್ಯಾರಾ ಏಷ್ಯಾಡ್‌ ಪದಕ ವಿಜೇತ ಉಷಾ ರಾಣಿ, ಕಿಶನ್‌, ಶರತ್‌ ಸೇರಿ ಹಲವು ಸಾಧಕರು ನೇಮಕಾತಿ ಪತ್ರ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಪ್ಯಾರಾ ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ವಿಶೇಷ ಸಾಧನೆ ಮಾಡಿದ ರಾಜ್ಯದ ಅಥ್ಲೀಟ್‌ಗಳಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೌಕರಿ ನೀಡುವುದಾಗಿ ರಾಜ್ಯ ಸರ್ಕಾರ ಕಳೆದ ವರ್ಷ ಮಾರ್ಚ್‌ನಲ್ಲೇ ಅಧಿಸೂಚನೆ ಹೊರಡಿಸಿತ್ತು.

 ಅಧಿಸೂಚನೆ ಪ್ರಕಾರ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರಿಗೆ ಗ್ರೂಪ್‌-ಎ, ಏಷ್ಯನ್‌ ಗೇಮ್ಸ್‌, ಪ್ಯಾರಾ ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್ ಗೇಮ್ಸ್‌ ಸಾಧಕರಿಗೆ ಗ್ರೂಪ್‌-ಡಿ ಹುದ್ದೆ ಲಭಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಕಳೆದ ಜನವರಿಯಲ್ಲಿ ಅಥ್ಲೀಟ್‌ಗಳಿಂದ ಸರ್ಕಾರ ಅರ್ಜಿ ಆಹ್ವಾನಿಸಿತ್ತು. ಸರ್ಕಾರಿ ಹುದ್ದೆಗಳಿಗೆ ಕ್ರೀಡಾ ಸಾಧಕರಿಂದ ಅರ್ಜಿ ಆಹ್ವಾನಿಸಿದ್ದ ಬಗ್ಗೆ ಕನ್ನಡಪ್ರಭ ಜ.14ರಂದೇ ವರದಿ ಪ್ರಕಟಿಸಿತ್ತು.

ರಾಜ್ಯ ಅಥ್ಲೆಟಿಕ್ಸ್‌: ಸ್ನೇಹಾ, ಉನ್ನತಿಗೆ ಚಿನ್ನದ ಪದಕ

ಬೆಂಗಳೂರು: ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಉನ್ನತಿ ಅಯ್ಯಪ್ಪ ಎರಡು, ಸ್ನೇಹಾ ಎಚ್‌.ಎಸ್‌. 1 ಚಿನ್ನದ ಪದಕ ಗೆದ್ದಿದ್ದಾರೆ. ಕೂಟದ ಮೊದಲ ದಿನವಾದ ಶನಿವಾರ ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಉನ್ನತಿ 14.10 ಸೆಕೆಂಡ್‌ಗಳಲ್ಲಿ ಕ್ರಮಿಸಿದರೆ, 200 ಮೀ. ಓಟದಲ್ಲಿ 23.50 ಸೆಕೆಂಡ್‌ಗಲ್ಲಿ ಗುರಿ ತಲುಪಿದರು. 100 ಮೀ. ಓಟದ ಸ್ಪರ್ಧೆಯಲ್ಲಿ ಸ್ನೇಹಾ 11.3 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಜಯಿಸಿದರು.

 ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಪಾವನಾ ನಾಗರಾಜ್‌, ಜಾವೆಲಿನ್‌ ಎಸೆತದಲ್ಲಿ ರಮ್ಯಶ್ರೀ, ಪುರುಷರ ಲಾಂಗ್‌ಜಂಪ್‌ನಲ್ಲಿ ಪುರುಷೋತ್ತಮ್‌, ಪುರುಷರ ಹ್ಯಾಮರ್‌ ಎಸೆತದಲ್ಲಿ ಸಚಿನ್‌, ಮಹಿಳೆಯರ ಹ್ಯಾಮರ್‌ ಎಸೆತದಲ್ಲಿ ಅಮ್ರೀನ್‌, ಪುರುಷರ 800 ಮೀ ,. ಓಟದಲ್ಲಿ ತುಷಾರ್‌, ಮಹಿಳಾ ವಿಭಾಗದಲ್ಲಿ ಅರ್ಪಿತಾ ಚಿನ್ನ ತಮ್ಮದಾಗಿಸಿಕೊಂಡರು. ಭಾನುವಾರ ಕೂಟದ ಕೊನೆ ದಿನ.