ಸಾರಾಂಶ
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಕ್ರೀಡಾಪಟುಗಳಿಗೆ ವಿರಾಟ್ ಕೊಹ್ಲಿ ಶುಭ ಹಾರೈಸಿದ್ದು, ನಿಮ್ಮ ಸಾಧನೆಯಿಂದಾಗಿ ದೇಶದ ಹೆಸರು ವಿಶ್ವದೆಲ್ಲೆಡೆ ಪಸರಿಸಲಿ ಎಂದಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ತಾಣಗಳಲ್ಲಿ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ. ‘
ಭಾರತವನ್ನು ಮೊದಲು ಪ್ರಪಂಚದಾದ್ಯಂತ ಹಾವಾಡಿಗರು ಮತ್ತು ಆನೆಗಳ ನಾಡು ಎಂದು ಮಾತ್ರ ನೋಡುತ್ತಿದ್ದರು. ಆದರೆ ಈಗ ಇದು ಬದಲಾಗಿದೆ. ಇಂದು ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಗ್ಲೋಬಲ್ ಟೆಕ್ ಹಬ್ ಎಂದು ಕರೆಯಲ್ಪಡುತ್ತೇವೆ. ಆರ್ಥಿಕವಾಗಿಯೂ ನಮ್ಮ ದೇಶ ಪ್ರಗತಿ ಸಾಧಿಸುತ್ತಿದೆ. ನಾವು ಕ್ರಿಕೆಟ್, ಬಾಲಿವುಡ್ ಮೂಲಕ ಗುರುತಿಸಲ್ಪಡುತ್ತಿದ್ದೇವೆ.
ಈಗ ನಾವೆಲ್ಲರೂ ಒಲಿಂಪಿಕ್ಸ್ ಕಡೆ ಗಮನಹರಿಸಿದ್ದೇವೆ. ನಮ್ಮ ದೇಶದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಹೆಚ್ಚಿನ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆಲ್ಲುವಂತಾಗಲಿ’ ಎಂದು ಹಾರೈಸಿದ್ದಾರೆ. ‘ನಮ್ಮ ಅಥ್ಲೀಟ್‌ಗಳು ಪ್ಯಾರಿಸ್ನಲ್ಲಿ ಪದಕ ಗೆಲ್ಲುವ ಕಾತರದಲ್ಲಿದ್ದಾರೆ. ಶತಕೋಟಿ ಭಾರತೀಯರ ಆಶೀರ್ವಾದ ಅವರ ಮೇಲಿದೆ. ನಿಮ್ಮ ಪ್ರದರ್ಶನವನ್ನು ನೋಡಲು ನಾವೆಲ್ಲರೂ ಉತ್ಸುಕರಾಗಿದ್ದೇವೆ. ನಿಮ್ಮ ಸಾಧನೆಯಿಂದ ದೇಶದ ಹೆಸರು ಎಲ್ಲಡೆ ಪಸರಿಸಲಿದೆ” ಎಂದು ಕೊಹ್ಲಿ ಈ ವಿಡಿಯೊದಲ್ಲಿ ಹೇಳಿದ್ದಾರೆ.