ನೀವು ಕೊಟ್ಟ ಬ್ಯಾಟ್‌ ಮುರಿದೋಯ್ತು, ಇನ್ನೊಂದು ಕೊಡಿ: ಕೊಹ್ಲಿ ಬಳಿ ಬೇಡಿದ ರಿಂಕು!

| Published : Apr 22 2024, 02:05 AM IST / Updated: Apr 22 2024, 04:54 AM IST

ನೀವು ಕೊಟ್ಟ ಬ್ಯಾಟ್‌ ಮುರಿದೋಯ್ತು, ಇನ್ನೊಂದು ಕೊಡಿ: ಕೊಹ್ಲಿ ಬಳಿ ಬೇಡಿದ ರಿಂಕು!
Share this Article
  • FB
  • TW
  • Linkdin
  • Email

ಸಾರಾಂಶ

ನಿಮ್ಮ ಮೇಲಾಣೆ ಮತ್ತೆ ಮುರಿಯಲ್ಲ ಎಂದು ಕೊಹ್ಲಿ ಮನವೊಲಿಸಲು ರಿಂಕು ಸಿಂಗ್‌ ಯತ್ನ. ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್‌.

ಕೋಲ್ಕತಾ: ರನ್ ಮಷಿನ್‌ ವಿರಾಟ್‌ ಕೊಹ್ಲಿಯಿಂದ ಬ್ಯಾಟ್‌ ಉಡುಗೊರೆಯಾಗಿ ಪಡೆಯಬೇಕು ಎನ್ನುವುದು ಪ್ರತಿ ಯುವ ಆಟಗಾರನ ಕನಸಾಗಿರುತ್ತದೆ. ಕೆಕೆಆರ್‌ ತಂಡದ ಸ್ಫೋಟಕ ಬ್ಯಾಟರ್‌ ರಿಂಕು ಸಿಂಗ್, ವಿರಾಟ್‌ರ ಬಳಿ ಹೊಸ ಬ್ಯಾಟ್‌ ಕೇಳಿದ ಪ್ರಸಂಗ, ಶನಿವಾರ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಿತು. 

ಆ ವಿಡಿಯೋವನ್ನು ಕೆಕೆಆರ್‌ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್‌ ಆಗಿದೆ. ಭಾನುವಾರದ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸಿ ಕೊಹ್ಲಿ ಡ್ರೆಸ್ಸಿಂಗ್‌ ರೂಂಗೆ ತೆರಳುವಾಗ ಅವರನ್ನು ಭೇಟಿಯಾದ ರಿಂಕು, ‘ನೀವು ಕೊಟ್ಟ ಬ್ಯಾಟ್‌ ಮುರಿದು ಹೋಯ್ತು’ ಎಂದರು. ಅದಕ್ಕೆ ಕೊಹ್ಲಿ, ‘ನನ್ನ ಬ್ಯಾಟ್‌ ಮುರಿದು ಹೋಯ್ತಾ, ಹೇಗೆ?’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಿಂಕು, ‘ಸ್ಪಿನ್ನರ್ ವಿರುದ್ಧ ಆಡುವಾಗ ಮುರಿಯಿತು, ಬ್ಯಾಟ್‌ನ ಮಧ್ಯಭಾಗ ಸೀಳು ಬಿಟ್ಟಿದೆ. ಬೇಕಿದ್ದರೆ ತೋರಿಸುತ್ತೇನೆ’ ಎಂದು ಕೊಹ್ಲಿಯ ಎರಡು ಬ್ಯಾಟ್‌ ಕೈಗೆತ್ತಿಕೊಂಡರು.

 ಆಗ ಕೊಹ್ಲಿ, ‘ಆ ಬ್ಯಾಟ್‌ ಚೆನ್ನಾಗಿಲ್ಲ’ ಎಂದರು. ಅದಕ್ಕೆ ರಿಂಕು, ‘ನನಗೆ ಕೊಡುತ್ತೀರಾ’ ಎಂದು ಕೇಳಿದ್ದಕ್ಕೆ ಕೊಹ್ಲಿ, ‘ಹಿಂದಿನ ಪಂದ್ಯದಲ್ಲಷ್ಟೇ ಒಂದು ಬ್ಯಾಟ್‌ ಕೊಟ್ಟಿದ್ದೇನೆ. ಈಗ ಇನ್ನೊಂದು ಬ್ಯಾಟ್‌ ಬೇಕಾ?, ಹೀಗೆ ಬ್ಯಾಟ್‌ ಕೊಡುತ್ತಿದ್ದರೆ ನಾನು ಕಷ್ಟಕ್ಕೆ ಸಿಲುಕುತ್ತೇನೆ’ ಎಂದರು. ಆಗ ರಿಂಕು, ‘ನಿಮ್ಮ ಮೇಲಾಣೆ ಮತ್ತೆ ಬ್ಯಾಟ್‌ ಮುರಿದು ಹೋಗದಂತೆ ನೋಡಿಕೊಳ್ಳುತ್ತೇನೆ’ ಎಂದರು. ಕೊಹ್ಲಿ ನಗುತ್ತಲೇ ಡ್ರೆಸ್ಸಿಂಗ್‌ ರೂಂಗೆ ತೆರಳಿದರು.