ಐಪಿಎಲ್‌ನಲ್ಲಿ ರಿಷಭ್‌ ಪಂತ್‌ ಆಡುವುದು ಖಚಿತ?

| Published : Mar 03 2024, 01:34 AM IST / Updated: Mar 03 2024, 08:50 AM IST

ಸಾರಾಂಶ

ಕಾರು ಅಪಘಾತದಲ್ಲಿ ಗಾಯಗೊಂಡು ಕ್ರಿಕೆಟ್‌ನಿಂದ ದೂರವುಳಿದಿದ್ದ ರಿಷಭ್‌ ಪಂತ್‌ ಐಪಿಎಲ್‌ ಟೂರ್ನಿಯಲ್ಲಿ ಆಡುತ್ತಾರಾ ? ಇಲ್ವಾ? ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ಸೌರವ್‌ ಗಂಗೂಲಿ ಮಾತನಾಡಿದ್ದಾರೆ.

ನವದೆಹಲಿ: ಕಾರು ಅಪಘಾತದಲ್ಲಿ ಗಾಯಗೊಂಡು ಕ್ರಿಕೆಟ್‌ನಿಂದ ದೂರವುಳಿದಿದ್ದ ರಿಷಭ್‌ ಪಂತ್‌ ಮಾ.5ರಂದು ಡೆಲ್ಲಿ ಕ್ಯಾಪಿಟಲ್ಸ್‌ ಅಭ್ಯಾಸ ಶಿಬಿರಕ್ಕೆ ಹಾಜರಾಗಲಿದ್ದಾರೆ ಎಂದು ತಂಡದ ಕ್ರಿಕೆಟ್‌ ನಿರ್ದೇಶಕ ಸೌರವ್‌ ಗಂಗೂಲಿ ತಿಳಿಸಿದ್ದಾರೆ. 

ಖಾಸಗಿ ಸಂದರ್ಶನವೊಂದರಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ಐಪಿಎಲ್‌ನಲ್ಲಿ ಪಂತ್‌ ಆಡುವುದನ್ನು ಬಹುತೇಕ ಖಚಿತಪಡಿಸಿದ್ದಾರೆ.

ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಕಾಯುತ್ತಿರುವ ಪಂತ್‌ ಮಾ.5ರಂದು ಮಹತ್ವದ ಮೈಲಿಗಲ್ಲೊಂದನ್ನು ದಾಟಲಿದ್ದು, ಆಟವಾಡಲು ಸಂಪೂರ್ಣ ಫಿಟ್‌ ಆಗಿದ್ದಾರೆಂದು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಘೋಷಿಸಲಿದೆ. 

ಎನ್‌ಸಿಎ ಒಪ್ಪಿಗೆ ನೀಡಿದ ತಕ್ಷಣ ಪಂತ್‌ ಡೆಲ್ಲಿ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಗಂಗೂಲಿ ಮಾಹಿತಿ ನೀಡಿದ್ದಾರೆ. 

ಟೆಸ್ಟ್‌: ನ್ಯೂಜಿಲೆಂಡ್‌ ಗೆಲುವಿಗೆ 369 ರನ್‌ ಗುರಿ ನೀಡಿದ ಆಸ್ಟ್ರೇಲಿಯಾ

ವೆಲ್ಲಿಂಗ್ಟನ್‌: ಅರೆಕಾಲಿಕ ಸ್ಪಿನ್ನರ್‌ ಗ್ಲೆನ್‌ ಫಿಲಿಪ್ಸ್‌ 45 ರನ್‌ ನೀಡಿ 5 ವಿಕೆಟ್‌ ಪರಿಣಾಮ, 2ನೇ ಇನ್ನಿಂಗ್ಸಲ್ಲಿ 164 ರನ್‌ಗೆ ಆಲೌಟ್‌ ಆದ ಆಸ್ಟ್ರೇಲಿಯಾ, ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ಗೆ ಗೆಲ್ಲಲು 369 ರನ್‌ ಗುರಿ ನೀಡಿದೆ. 

ಶನಿವಾರ 2ನೇ ಇನ್ನಿಂಗ್ಸ್‌ ಆರಂಭಿಸಿದ ಕಿವೀಸ್‌, ದಿನದಂತ್ಯಕ್ಕೆ 3 ವಿಕೆಟ್‌ಗೆ 111 ರನ್‌ ಗಳಿಸಿದ್ದು, ಗೆಲ್ಲಲು ಇನ್ನೂ 258 ರನ್‌ ಕಲೆಹಾಕಬೇಕಿದೆ. ಪಂದ್ಯದಲ್ಲಿ ಇನ್ನೂ 2 ದಿನ ಬಾಕಿ ಇದೆ.