ಸಾರಾಂಶ
ನವದೆಹಲಿ: ಜೂನ್ 1 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ತಾರಾ ಆಟಗಾರ ವಿರಾಟ್ ಕೊಹ್ಲಿಗೆ ಭಾರತ ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಎಂದು ಹೇಳಲಾಗುತ್ತಿತ್ತು.
ಆದರೆ ಏನೇ ಆದರೂ ವಿರಾಟ್ ಕೊಹ್ಲಿ ವಿಶ್ವಕಪ್ ತಂಡದಲ್ಲಿ ಇರಲೇಬೇಕು ಎಂದು ನಾಯಕ ರೋಹಿತ್ ಶರ್ಮಾ ಬಿಸಿಸಿಐಗೆ ಸೂಚಿಸಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೊಹ್ಲಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ಅಧಿಕೃತ ಪ್ರಕಟನೆ ಬರಲಿದೆ ಎಂದಿದ್ದಾರೆ.
ಈ ಬಾರಿಯ ವಿಶ್ವಕಪ್ ನಡೆಯುವ ವೆಸ್ಟ್‌ಇಂಡೀಸ್‌ನಲ್ಲಿ ನಿಧಾನಗತಿ ಪಿಚ್ಗಳಿದ್ದು, ಇದು ಕೊಹ್ಲಿಯ ಬ್ಯಾಟಿಂಗ್ ಶೈಲಿಗೆ ಸರಿಹೊಂದುವುದಿಲ್ಲ. ಹೀಗಾಗಿ ವಿಶ್ವಕಪ್ಗೆ ತಂಡದಲ್ಲಿ ಕೊಹ್ಲಿಗೆ ಸ್ಥಾನ ನೀಡಲಾಗುವುದಿಲ್ಲ ಎಂದು ಈ ಮೊದಲು ವರದಿಯಾಗಿತ್ತು.
ಕಿರಿಯ ಆಟಗಾರರಿಗೆ ತಂಡದಲ್ಲಿ ಅವಕಾಶ ಮಾಡಿಕೊಡಲು ಕೊಹ್ಲಿಯನ್ನು ಮನವೊಲಿಸುವಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರಿಗೆ ಸೂಚಿಸಿದ್ದರು ಎನ್ನಲಾಗಿತ್ತು.
ಆದರೆ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಡಲು ರೋಹಿತ್ ಒಪ್ಪುತ್ತಿಲ್ಲ. ಅವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಬೇಕೆಂದು ರೋಹಿತ್ ಅವರು ಜಯ್ ಶಾಗೆ ಹೇಳಿದ್ದಾರೆ.
ಹೀಗಾಗಿ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಕಣಕ್ಕಿಳಿಯುವುದು ಖಚಿತ ಎಂದು ಕೀರ್ತಿ ಆಝಾದ್ ಅವರು ತಿಳಿಸಿದ್ದಾರೆ.