ಸಾರಾಂಶ
ಮುಲ್ತಾನ್: ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಅತಿಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಎನ್ನುವ ದಾಖಲೆಯನ್ನು ಜೋ ರೂಟ್ ಬರೆದಿದ್ದಾರೆ. ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 71 ರನ್ ಗಳಿಸಿದಾಗ ರೂಟ್, ಕುಕ್ ಅವರ 12472 ರನ್‌ಗಳ ದಾಖಲೆಯನ್ನು ಮುರಿದು ಅಗ್ರಸ್ಥಾನಕ್ಕೇರಿದರು.
ಸದ್ಯ ರೂಟ್ ಸಾರ್ವಕಾಲಿಕ ಅಧಿಕ ರನ್ ಸರದಾರರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. ಸಚಿನ್, ಪಾಂಟಿಂಗ್, ಕಾಲಿಸ್ ಹಾಗೂ ದ್ರಾವಿಡ್ ಮೊದಲ 4 ಸ್ಥಾನಗಳಲ್ಲಿದ್ದಾರೆ. ಇದೇ ವೇಳೆ ಟೆಸ್ಟ್‌ನಲ್ಲಿ 35ನೇ ಶತಕ ಪೂರೈಸಿದ ರೂಟ್, ತಲಾ 34 ಶತಕ ಬಾರಿಸಿರುವ ಗವಾಸ್ಕರ್, ಲಾರಾ, ಜಯವರ್ಧನೆ, ಯೂನಿಸ್ ಖಾನ್‌ರನ್ನು ಹಿಂದಿಕ್ಕಿದರು.
1ನೇ ಟೆಸ್ಟ್: ಪಾಕ್‌ಗೆ ಇಂಗ್ಲೆಂಡ್ ದಿಟ್ಟ ಉತ್ತರ
ಮುಲ್ತಾನ್: ‘ಹೈವೇ’ ಎಂದು ಕರೆಸಿಕೊಳ್ಳುತ್ತಿರುವ ಇಲ್ಲಿನ ಪಿಚ್‌ನಲ್ಲಿ ಆತಿಥೇಯ ಪಾಕಿಸ್ತಾನ ತಂಡದಂತೆಯೇ ಪ್ರವಾಸಿ ಇಂಗ್ಲೆಂಡ್ ಸಹ ರನ್ ಹೊಳೆಯನ್ನೇ ಹರಿಸುತ್ತಿದೆ.
ಪಾಕ್‌ನ ಮೊದಲ ಇನ್ನಿಂಗ್ಸ್ ಮೊತ್ತ 556 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸಲ್ಲಿ 3ನೇ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 492 ರನ್ ಗಳಿಸಿದ್ದು, ಇನ್ನಿಂಗ್ಸ್ ಮುನ್ನಡೆ ಸಾಧಿಸುವತ್ತ ಚಿತ್ತ ನೆಟ್ಟಿದೆ.
ಜೋ ರೂಟ್ ಔಟಾಗದೆ 176 ಹಾಗೂ ಹ್ಯಾರಿ ಬ್ರೂಕ್ ಔಟಾಗದೆ 141 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನೆರಡು ದಿನ ಬಾಕಿ ಇದ್ದು, ಪಂದ್ಯ ಬಹುತೇಕ ಡ್ರಾದತ್ತ ಸಾಗಿದೆ.