ಚಿನ್ನಸ್ವಾಮಿ ಅಂಗಳದಲ್ಲಿ ಟೈಟನ್ಸ್‌ನ ಚೆಂಡಾಡಿ ಗೆದ್ದ ಆರ್‌ಸಿಬಿ!

| Published : May 05 2024, 02:02 AM IST / Updated: May 05 2024, 04:21 AM IST

ಚಿನ್ನಸ್ವಾಮಿ ಅಂಗಳದಲ್ಲಿ ಟೈಟನ್ಸ್‌ನ ಚೆಂಡಾಡಿ ಗೆದ್ದ ಆರ್‌ಸಿಬಿ!
Share this Article
  • FB
  • TW
  • Linkdin
  • Email

ಸಾರಾಂಶ

ತವರಿನಲ್ಲಿ ಆರ್ಭಟಿಸಿದ ಆರ್‌ಸಿಬಿಗೆ 4 ವಿಕೆಟ್‌ ಗೆಲುವು. 11ರಲ್ಲಿ 4ನೇ ಜಯ, 7ನೇ ಸ್ಥಾನಕ್ಕೆ ಜಿಗಿತ. ಪ್ಲೇ-ಆಫ್‌ ರೇಸ್‌ ಈಗ ಮತ್ತಷ್ಟು ರೋಚಕ. ಗುಜರಾತ್‌ 147/10. 6 ಓವರಲ್ಲೇ ಡು ಪ್ಲೆಸಿ-ಕೊಹ್ಲಿ 92 ರನ್‌. ಬಳಿಕ ನಾಟಕೀಯ ಕುಸಿತ, 13.4 ಓವರಲ್ಲಿ ಜಯ. ಟೈಟಾನ್ಸ್‌ಗೆ 7ನೇ ಸೋಲು

ಬೆಂಗಳೂರು: ಅಹಮದಾಬಾದ್‌ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಗುಜರಾತ್‌ ಟೈಟಾನ್ಸ್‌ನ ಅಕ್ಷರಶಃ ಚೆಂಡಾಡಿದ ಆರ್‌ಸಿಬಿ 17ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಬೌಲಿಂಗ್‌ನಲ್ಲಿ ಬೆಂಕಿ ದಾಳಿ, ನಾಯಕ ಫಾಫ್‌ ಡು ಪ್ಲೆಸಿ-ವಿರಾಟ್‌ ಕೊಹ್ಲಿಯ ಅಬ್ಬರ ಹಾಗೂ ಬಳಿಕ ನಾಟಕೀಯ ಕುಸಿತಕ್ಕೆ ಸಾಕ್ಷಿಯಾದ ಶನಿವಾರದ ಪಂದ್ಯದಲ್ಲಿ ಆರ್‌ಸಿಬಿಗೆ 4 ವಿಕೆಟ್‌ಗಳಿಂದ ವಿಜಯಲಕ್ಷ್ಮಿ ಒಲಿದಿದೆ.

ಟೂರ್ನಿಯಲ್ಲಿದು ಆರ್‌ಸಿಬಿಗೆ 11ರಲ್ಲಿ 4ನೇ ಜಯ. ಅತ್ತ ಗುಜರಾತ್‌ 11ರಲ್ಲಿ 7ನೇ ಸೋಲುಂಡಿದ್ದು, ಪ್ಲೇ-ಆಫ್‌ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 19.3 ಓವರಲ್ಲಿ 147ಕ್ಕೆ ಸರ್ವಪತನ ಕಂಡಿತು. ಇದು ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಆರ್‌ಸಿಬಿ ಪಾಲಿಗೆ ತುಂಬಾ ಸಣ್ಣ ಮೊತ್ತ. ಆರ್‌ಸಿಬಿಯ ಆರಂಭಿಕ ಆಟ ಗಮನಿಸಿದರೆ ತಂಡ 10 ಓವರಲ್ಲೇ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಅದನ್ನು ಪವರ್‌ಪ್ಲೇನಲ್ಲಿ ಆರ್‌ಸಿಬಿ ಸಾಬೀತುಪಡಿಸಿತಾದರೂ, ಕೊನೆಯಲ್ಲಿ ನಾಟಕೀಯ ಕುಸಿತ ಕಂಡಿದ್ದರಿಂದ 13.4 ಓವರ್‌ನಲ್ಲಿ 6 ವಿಕೆಟ್‌ ಕಳೆದುಕೊಂಡು ಗೆಲುವು ತನ್ನದಾಗಿಸಿಕೊಂಡಿತು.ಕೊಹ್ಲಿ ಹಾಗೂ ಡು ಪ್ಲೆಸಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಅಬ್ಬರಿಸಿದರು. 

ಈ ಜೋಡಿ ಪವರ್‌-ಪ್ಲೇನಲ್ಲಿ ಕಲೆಹಾಕಿದ್ದು 92 ರನ್‌. ಆದರೆ 18 ಎಸೆತದಲ್ಲಿ ಫಿಫ್ಟಿ ಸಿಡಿಸಿದ್ದ ಡು ಪ್ಲೆಸಿ 23 ಎಸೆತಗಳಲ್ಲಿ 64 ರನ್‌ ಚಚ್ಚಿ 6ನೇ ಓವರ್‌ ಕೊನೆಯಲ್ಲಿ ನಿರ್ಗಮಿಸಿದರು. ಇದರೊಂದಿಗೆ ತಂಡದ ಪತನ ಆರಂಭಗೊಂಡಿತು. ಜ್ಯಾಕ್ಸ್‌(01), ರಜತ್‌(02), ಮ್ಯಾಕ್ಸ್‌ವೆಲ್‌(04), ಗ್ರೀನ್‌(01) ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ಗೆ ಮರಳಿದರು. 27 ಎಸೆತಗಳಲ್ಲಿ 42 ರನ್‌ ಸಿಡಿಸಿದ್ದ ಕೊಹ್ಲಿಯೂ ಔಟಾಗುವುದರೊಂದಿಗೆ ತಂಡ ಸೋಲಿನ ಸುಳಿಗೆ ಸಿಲುಕಿದರೂ, ಕಾರ್ತಿಕ್(ಔಟಾಗದೆ 21), ಸ್ವಪ್ನಿಲ್‌(ಔಟಾಗದೆ 15) ತಂಡವನ್ನು ಗೆಲ್ಲಿಸಿದರು.ಬ್ಯಾಟಿಂಗ್‌ ವೈಫಲ್ಯ: ಇದಕ್ಕೂ ಮೊದಲು ಪವರ್‌-ಪ್ಲೇನಲ್ಲೇ 3 ವಿಕೆಟ್‌ ಕಳೆದುಕೊಂಡು 23 ರನ್ ಗಳಿಸಿದ್ದ ಗುಜರಾತ್‌ಗೆ ಶಾರುಖ್‌ ಖಾನ್‌(37), ರಾಹುಲ್‌ ತೆವಾಟಿಯಾ(35) ಹಾಗೂ ಡೇವಿಡ್‌ ಮಿಲ್ಲರ್‌(30) ಹೋರಾಟ ನೆರವಾಯಿತು. ರಶೀದ್ ಖಾನ್‌(18), ವಿಜಯ್‌ ಶಂಕರ್‌(10) ತಂಡವನ್ನು 150ರ ಸನಿಹಕ್ಕೆ ತಂದರು. ಸಿರಾಜ್‌, ವೈಶಾಖ್‌, ಯಶ್‌ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌: ಗುಜರಾತ್‌ 19.3 ಓವರಲ್ಲಿ 147/10 (ಶಾರುಖ್‌ 37, ತೆವಾಟಿಯಾ 35, ದಯಾಳ್‌ 2-21), ಆರ್‌ಸಿಬಿ 13.4 ಓವರಲ್ಲಿ 152/6 (ಡು ಪ್ಲೆಸಿ 64, ಕೊಹ್ಲಿ 42, ಜೋಶುವಾ 4-45) ಪಂದ್ಯಶ್ರೇಷ್ಠ: ಮೊಹಮದ್ ಸಿರಾಜ್‌

ಏಳನೇ ಸ್ಥಾನಕ್ಕೆ ಜಿಗಿತ, ಪ್ಲೇಆಫ್‌ ಆಸೆ ಜೀವಂತ!

ಮೊದಲ 8 ಪಂದ್ಯದಲ್ಲಿ 7 ಸೋಲು ಕಂಡಿದ್ದ ಆರ್‌ಸಿಬಿ, ಈಗ ಹ್ಯಾಟ್ರಿಕ್‌ ಗೆಲುವು ಸಾಧಿಸಿತು. ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ತಂಡ 7ನೇ ಸ್ಥಾನಕ್ಕೆ ಭರ್ಜರಿ ಜಿಗಿತ ಸಾಧಿಸಿತು. ಹೀಗಾಗಿ ಆರ್‌ಸಿಬಿಯ ಪ್ಲೇ-ಆಫ್‌ ಲೆಕ್ಕಾಚಾರ ಮತ್ತಷ್ಟು ರೋಚಕತೆ ಹುಟ್ಟುಹಾಕಿದೆ. ತಂಡ ಇನ್ನುಳಿದ 3 ಪಂದ್ಯ ಗೆದ್ದರೆ 14 ಅಂಕ ಆಗಲಿದ್ದು, ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬಂದರೆ ಪ್ಲೇ-ಆಫ್‌ಗೇರುವ ಅದೃಷ್ಟ ಆರ್‌ಸಿಬಿಗೆ ಒಲಿಯಲಿದೆ.

64 ರನ್‌: ಡು ಪ್ಲೆಸಿ ಪವರ್-ಪ್ಲೇನಲ್ಲಿ 64 ರನ್‌ ಗಳಿಸಿದರು. ಇದು ಆರ್‌ಸಿಬಿ ಬ್ಯಾಟರ್‌ಗಳ ಪೈಕಿ ಗರಿಷ್ಠ. ಗೇಲ್‌ 3 ಬಾರಿ ತಲಾ 50 ರನ್‌ ಬಾರಿಸಿದ್ದರು.

18 ಎಸೆತ: ಡು ಪ್ಲೆಸಿ 18 ಎಸೆತದಲ್ಲಿ ಫಿಫ್ಟಿ ಪೂರ್ಣಗೊಳಿಸಿದರು. ಆರ್‌ಸಿಬಿ ಬ್ಯಾಟರ್‌ಗಳ ಪೈಕಿ ಇದು 2ನೇ ವೇಗದ ಫಿಫ್ಟಿ. ಗೇಲ್‌ 17 ಎಸೆತದಲ್ಲಿ ಫಿಫ್ಟಿ ಸಿಡಿಸಿದ್ದರು.

01ನೇ ಗರಿಷ್ಠ: ಆರ್‌ಸಿಬಿ ಪವರ್‌-ಪ್ಲೇನಲ್ಲಿ 92 ರನ್‌ ಗಳಿಸಿತು. ಇದು ಐಪಿಎಲ್‌ನಲ್ಲೇ ತಂಡದ ಗರಿಷ್ಠ ಪವರ್‌-ಪ್ಲೇ ಸ್ಕೋರ್‌.