ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂ : ಸೆಮೀಸ್‌ಗೆ ಫ್ರಿಟ್ಜ್‌, ಅರೈನಾ ಸಬಲೆಂಕಾ!

| Published : Sep 05 2024, 12:36 AM IST / Updated: Sep 05 2024, 03:18 AM IST

ಸಾರಾಂಶ

ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನ ಸೆಮಿಫೈನಲ್‌ ಪ್ರವೇಶಿಸಿದ ಅರೈನಾ ಸಬಲೆಂಕಾ, ಟೇಲರ್‌ ಫ್ರಿಟ್ಜ್‌. ಫ್ರಾನ್ಸೆಸ್‌ ಟಿಯಾಫೋ, ಎಮ್ಮಾ ನವಾರ್ರೋ ಕೂಡ ಅಂತಿಮ 4ರ ಸುತ್ತಿಗೆ ಪ್ರವೇಶ.

ನ್ಯೂಯಾರ್ಕ್‌: ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿ ಕುತೂಹಲ ಘಟ್ಟ ತಲುಪಿದ್ದು, ಪುರುಷರ ಸಿಂಗಲ್ಸ್‌ನಲ್ಲಿ ಅಮೆರಿಕದ ಟೇಲರ್‌ ಫ್ರಿಟ್ಜ್‌ ಹಾಗೂ ಫ್ರಾನ್ಸೆಸ್‌ ಟಿಯಾಫೋ, ಮಹಿಳಾ ಸಿಂಗಲ್ಸ್‌ನಲ್ಲಿ ಬೆಲಾರುಸ್‌ನ ಅರೈನಾ ಸಬಲೆಂಕಾ ಹಾಗೂ ಅಮೆರಿಕದ ಎಮ್ಮಾ ನವಾರ್ರೋ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಕ್ವಾರ್ಟರ್‌ ಫೈನಲ್‌ನಲ್ಲಿ ಫ್ರಿಟ್ಜ್‌, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ 7-6, 3-6, 6-4, 7-6 ಸೆಟ್‌ಗಳಲ್ಲಿ ಜಯ ಸಾಧಿಸಿ, ಚೊಚ್ಚಲ ಬಾರಿಗೆ ಗ್ರ್ಯಾನ್‌ ಸ್ಲಾಂ ಸೆಮಿಫೈನಲ್‌ ಪ್ರವೇಶಿಸಿದರು.

ಇನ್ನು, ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಟಿಯಾಫೋಗೆ ವಾಕ್‌ ಓವರ್‌ ಸಿಕ್ಕಿತು. ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೊವ್‌ ಗಾಯಗೊಂಡು ನಿವೃತ್ತಿ ಪಡೆದ ಕಾರಣ, ಟಿಯಾಫೋ ಸೆಮೀಸ್‌ಗೆ ಮುನ್ನಡೆದರು. ಪಂದ್ಯದಲ್ಲಿ ಟಿಯಾಫೋ 6-3, 6-7, 6-3, 4-1ರಿಂದ ಮುಂದಿದ್ದರು.

ಇನ್ನು, ಮಹಿಳಾ ಸಿಂಗಲ್ಸ್‌ನಲ್ಲಿ ಸಬಲೆಂಕಾ, ಚೀನಾದ ಕಿನ್‌ವೆನ್‌ ಝಾಂಗ್‌ ವಿರುದ್ಧ 6-1, 6-2 ನೇರ ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರೆ, ಎಮ್ಮಾ ನವಾರ್ರೋಗೆ ಸ್ಪೇನ್‌ನ ಪೌಲಾ ಬಡೋಸಾ ವಿರುದ್ಧ 6-2, 7-5 ಸೆಟ್‌ಗಳಲ್ಲಿ ಗೆಲುವು ಒಲಿಯಿತು. ಬೋಪಣ್ಣ ಜೋಡಿಗೆ ಸೋಲು

ಮಿಶ್ರ ಡಬಲ್ಸ್‌ನ ಸೆಮಿಫೈನಲ್‌ನಲ್ಲಿ ರೋಹನ್‌ ಬೋಪಣ್ಣ ಹಾಗೂ ಇಂಡೋನೇಷ್ಯಾದ ಆಲ್ದಿಲಾ ಜೋಡಿಗೆ ಸೋಲು ಎದುರಾಯಿತು. ಅಮೆರಿಕದ ಡೊನಾಲ್ಡ್‌ ಯಂಗ್‌ ಹಾಗೂ ಟೇಲರ್‌ ಟೌನ್ಸ್‌ಸೆಂಡ್‌ ವಿರುದ್ಧ 3-6, 4-6ರಲ್ಲಿ ಇಂಡೋ-ಇಂಡೋನೇಷ್ಯಾ ಜೋಡಿ ಸೋಲುಂಡಿತು.