ಟಿ20 ವಿಶ್ವಕಪ್‌: ಫಿಲ್‌ ಸಾಲ್ಟ್‌ ಆರ್ಭಟಕ್ಕೆ ವಿಂಡೀಸ್‌ ತಬ್ಬಿಬ್ಬು

| Published : Jun 21 2024, 01:11 AM IST / Updated: Jun 21 2024, 04:12 AM IST

ಟಿ20 ವಿಶ್ವಕಪ್‌: ಫಿಲ್‌ ಸಾಲ್ಟ್‌ ಆರ್ಭಟಕ್ಕೆ ವಿಂಡೀಸ್‌ ತಬ್ಬಿಬ್ಬು
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಕಪ್‌ ಸೂಪರ್‌-8. ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ಗೆ ವೆಸ್ಟ್‌ಇಂಡೀಸ್‌ ವಿರುದ್ಧ 8 ವಿಕೆಟ್‌ ಭರ್ಜರಿ ಗೆಲುವು. ವೆಸ್ಟ್‌ಇಂಡೀಸ್‌ 4 ವಿಕೆಟ್‌ಗೆ 180 ರನ್‌. ಫಿಲ್‌ ಸಾಲ್ಟ್‌ ಸ್ಫೋಟಕ 87 ರನ್‌ ನೆರವಿನಿಂದ 17.3 ಓವರಲ್ಲೇ ಗುರಿ ಬೆನ್ನತ್ತಿ ಗೆದ್ದ ಇಂಗ್ಲೆಂಡ್‌.

ಗ್ರಾಸ್‌ ಐಲೆಟ್‌(ಸೇಂಟ್‌ ಲೂಸಿಯಾ): ಫಿಲ್‌ ಸಾಲ್ಟ್‌ ಸ್ಫೋಟಕ ಆಟದ ನೆರವಿನಿಂದ ಮಾಜಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ ವಿರುದ್ಧದ ಟಿ20 ವಿಶ್ವಕಪ್‌ನ ಸೂಪರ್‌-8 ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ 8 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿದೆ.

ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 4 ವಿಕೆಟ್‌ ಕಳೆದುಕೊಂಡು 180 ರನ್‌ ಕಲೆಹಾಕಿತು. 220+ ರನ್‌ಗಳ ನಿರೀಕ್ಷೆ ಇತ್ತಾದರೂ ಅನಗತ್ಯ ಡಾಟ್‌ ಬಾಲ್‌ಗಳಿಂದಾಗಿ ತಂಡ 200ರ ಗಡಿ ದಾಟಲೂ ಸಾಧ್ಯವಾಗಲಿಲ್ಲ. ಆರಂಭಿಕ ಆಟಗಾರ ಜಾನ್ಸನ್‌ ಚಾರ್ಲ್ಸ್‌ 38, ನಿಕೋಲಸ್‌ ಪೂರನ್‌ 36, ನಾಯಕ ಪೋವೆಲ್‌ 17 ಎಸೆತಗಳಲ್ಲಿ 36, ಶೆರ್ಫಾನೆ ರುಥರ್‌ಫೋರ್ಡ್‌ ಔಟಾಗದೆ 28, ಬ್ರೆಂಡಾನ್ ಕಿಂಗ್‌ 23 ರನ್‌ ಕೊಡುಗೆ ನೀಡಿದರು. 

ಗುರಿ ದೊಡ್ಡದಾಗಿದ್ದರೂ ವಿಂಡೀಸ್‌ ಬೌಲರ್‌ಗಳನ್ನು ಚೆಂಡಾಡಿದ ಇಂಗ್ಲೆಂಡ್‌, 17.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು. ಜೋಸ್ ಬಟ್ಲರ್‌(25) ಹಾಗೂ ಸಾಲ್ಟ್‌ ಮೊದಲ ವಿಕೆಟ್‌ಗೆ 7.4 ಓವರಲ್ಲಿ 67 ರನ್‌ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಬಳಿಕ ಮುರಿಯದ 3ನೇ ವಿಕೆಟ್‌ಗೆ ಸಾಲ್ಟ್‌-ಬೇರ್‌ಸ್ಟೋವ್‌ 44 ಎಸೆತಗಳಲ್ಲಿ 97 ರನ್ ಸೇರಿಸಿ ತಂಡವನ್ನು ಗೆಲ್ಲಿಸಿದರು. ಪವರ್‌-ಪ್ಲೇನಲ್ಲಿ 3 ಬೌಂಡರಿ, 2 ಸಿಕ್ಸರ್‌ ಬಾರಿಸಿದ್ದ ಸಾಲ್ಟ್‌, ಬಳಿಕ 15ನೇ ಓವರ್‌ ಕೊನೆವರೆಗೂ ಒಂದೂ ಬೌಂಡರಿ ಹೊಡೆದಿರಲಿಲ್ಲ.

 ಆದರೆ ತಂಡಕ್ಕೆ 30 ಎಸೆತಗಳಲ್ಲಿ 40 ರನ್‌ ಬೇಕಿದ್ದಾಗ ಶೆಫರ್ಡ್‌ ಎಸೆದ 16ನೇ ಓವರಲ್ಲಿ 3 ಬೌಂಡರಿ, 3 ಸಿಕ್ಸರ್‌ನೊಂದಿಗೆ 30 ರನ್‌ ದೋಚಿದ ಸಾಲ್ಟ್‌, ತಂಡವನ್ನು ಸುಲಭವಾಗಿ ಗುರಿ ಮುಟ್ಟಿಸಿದರು. ಬೇರ್‌ಸ್ಟೋವ್‌ 26 ಎಸೆತಗಳಲ್ಲಿ 48 ರನ್‌ ಗಳಿಸಿದರೆ, ಸಾಲ್ಟ್‌ 47 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್‌ನೊಂದಿಗೆ 87 ರನ್‌ ಚಚ್ಚಿದರು. ಸ್ಕೋರ್‌: ವಿಂಡೀಸ್ 20 ಓವರಲ್ಲಿ 180/4 (ಚಾರ್ಲ್ಸ್‌ 38, ಪೋವೆಲ್‌ 36, ಪೂರನ್‌ 36, ಮೊಯೀನ್‌ 1-15), ಇಂಗ್ಲೆಂಡ್‌ 17.3 ಓವರಲ್ಲಿ 181/2 (ಸಾಲ್ಟ್‌ 87*, ಬೇರ್‌ಸ್ಟೋವ್‌ 48*, ಚೇಸ್‌ 1-19) ಪಂದ್ಯಶ್ರೇಷ್ಠ: ಫಿಲ್‌ ಸಾಲ್ಟ್‌

ವಿಂಡೀಸ್‌ ಇನ್ನಿಂಗ್ಸಲ್ಲಿ51 ಡಾಟ್‌ಬಾಲ್‌!

ವಿಂಡೀಸ್‌ಗೆ 220 ರನ್‌ ದಾಟುವ ಅವಕಾಶವಿತ್ತಾದರೂ ಅದನ್ನು ಬಳಸಿಕೊಳ್ಳಲಿಲ್ಲ. ತಂಡದ ಇನ್ನಿಂಗ್ಸಲ್ಲಿ ಬರೋಬ್ಬರಿ 51 ಡಾಟ್‌ಬಾಲ್‌ಗಳಿದ್ದವು. ಅಂದರೆ ವಿಂಡೀಸ್‌ ಕೇವಲ 69 ಎಸೆತದಲ್ಲಿ 180 ರನ್‌ ಕಲೆಹಾಕಿತು. ಬೌಂಡರಿ, ಸಿಕ್ಸರ್‌ಗಳತ್ತ ಹೆಚ್ಚು ಗಮನ ಹರಿಸಿ ಅಗತ್ಯಕ್ಕಿಂತ ಹೆಚ್ಚು ಡಾಟ್‌ಬಾಲ್‌ಗಳನ್ನಾಡಿದ್ದೇ ವಿಂಡೀಸ್‌ ಸೋಲಿಗೆ ಪ್ರಮುಖ ಕಾರಣ.