ಸ್ವತಂತ್ರ ಸಮಿತಿ ವಿಸರ್ಜನೆ: ಮತ್ತೆ ಡಬ್ಲ್ಯುಎಫ್‌ಐಗೆ ಕುಸ್ತಿಯ ಅಧಿಕಾರ

| Published : Mar 19 2024, 12:54 AM IST

ಸಾರಾಂಶ

ಡಿಸೆಂಬರಲ್ಲಿ ಚುನಾವಣೆ ನಡೆದ ಕೆಲ ದಿನಗಳಲ್ಲೇ ಡಬ್ಲ್ಯುಎಫ್ಐಅನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿತ್ತು. ಬಳಿಕ ಸ್ವತಂತ್ರ ಸಮಿತಿಯೇ ದೇಶದ ಕುಸ್ತಿ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿತ್ತು.

ನವದೆಹಲಿ: ಭಾರತೀಯ ಕುಸ್ತಿ ಸಂಸ್ಥೆ(ಡಬ್ಲ್ಯುಎಫ್‌ಐ)ಯನ್ನು ಈ ವರೆಗೂ ನಿಯಂತ್ರಿಸುತ್ತಿದ್ದ ಸ್ವತಂತ್ರ ಸಮಿತಿಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ) ಸೋಮವಾರ ವಿಸರ್ಜಿಸಿದ್ದು, ಈ ಹಿಂದೆ ಇದ್ದ ಸಂಜಯ್‌ ಸಿಂಗ್‌ ನೇತೃತ್ವದ ಸಮಿತಿಗೆ ಅಧಿಕಾರ ನೀಡಿದೆ.

ಡಿ.21ರಂದು ಕುಸ್ತಿ ಫೆಡರೇಶನ್‌ಗೆ ಚುನಾವಣೆ ನಡೆದ ಕೆಲ ದಿನಗಳಲ್ಲೇ ಡಬ್ಲ್ಯುಎಫ್ಐಅನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿತ್ತು. ಸರ್ಕಾರದ ಕ್ರೀಡಾ ನೀತಿ ಮತ್ತು ತನ್ನದೇ ಸಂವಿಧಾನಿಕ ನಿಯಮ ಉಲ್ಲಂಘಿಸಿದ್ದಕ್ಕೆ ಡಬ್ಲ್ಯುಎಫ್‌ಐ ಅಮಾನತುಗೊಂಡಿತ್ತು. ಬಳಿಕ ದೇಶದಲ್ಲಿ ಕುಸ್ತಿ ಚಟುವಟಿಕೆ ಮುಂದುವರಿಸುವ ನಿಟ್ಟಿನಲ್ಲಿ ಒಲಿಂಪಿಕ್‌ ಸಂಸ್ಥೆಯು ಭೂಪೇಂದ್ರ ಸಿಂಗ್‌ ಬಜ್ವಾ ನೇತೃತ್ವದ ತಾತ್ಕಾಲಿಕ ಸಮಿತಿಯನ್ನು ರಚಿಸಿತ್ತು. ಸಮಿತಿಯು ಇತ್ತೀಚೆಗಷ್ಟೇ ಆಯ್ಕೆ ಟ್ರಯಲ್ಸ್‌ ಕೂಡಾ ಆಯೋಜಿಸಿತ್ತು.ಆದರೆ ಜಾಗತಿಕ ಸಂಸ್ಥೆಯು ಇತ್ತೀಚೆಗಷ್ಟೇ ಡಬ್ಲ್ಯುಎಫ್‌ಐ ಮೇಲಿನ ನಿಷೇಧ ಹಿಂಪಡೆದಿರುವ ಹಿನ್ನೆಲೆಯಲ್ಲಿ ಐಒಎ ಸ್ವತಂತ್ರ ಸಮಿತಿಯನ್ನು ಬರ್ಕಾಸ್ತುಗೊಳಿಸಿ ಚುನಾವಣೆ ಮೂಲಕ ಅಧಿಕಾರಕ್ಕೇರಿದ್ದ ಸಂಜಯ್‌ ನೇತೃತ್ವದ ಸಮಿತಿಗೆ ಅಧಿಕಾರ ನೀಡಿದೆ. ಇನ್ನು ಆಯ್ಕೆ ಟ್ರಯಲ್ಸ್, ಟೂರ್ನಿಗಳೆಲ್ಲವನ್ನೂ ಡಬ್ಲ್ಯುಎಫ್‌ಐ ನೋಡಿಕೊಳ್ಳಲಿದೆ.