ಟಿ20 ವಿಶ್ವಕಪ್‌: ಭಾರತ vs ಪಾಕ್‌ ಪಂದ್ಯದ ಟಿಕೆಟ್‌ಗೆ ನಿಲ್ಲದ ಡಿಮ್ಯಾಂಡ್‌!

| Published : May 21 2024, 12:45 AM IST / Updated: May 21 2024, 04:20 AM IST

ಟಿ20 ವಿಶ್ವಕಪ್‌: ಭಾರತ vs ಪಾಕ್‌ ಪಂದ್ಯದ ಟಿಕೆಟ್‌ಗೆ ನಿಲ್ಲದ ಡಿಮ್ಯಾಂಡ್‌!
Share this Article
  • FB
  • TW
  • Linkdin
  • Email

ಸಾರಾಂಶ

ಟಿ20 ವಿಶ್ವಕಪ್‌ನ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಎಲ್ಲಿಲ್ಲದ ಡಿಮ್ಯಾಂಡ್‌. ಲಕ್ಷ ಲಕ್ಷ ರು.ಗೆ ಸೇಲಾಗುತ್ತಿದೆ ಟಿಕೆಟ್‌ಗಳು. ಥರ್ಡ್‌ ಪಾರ್ಟಿ ವೆಬ್‌ಸೈಟ್‌ಗಳಲ್ಲಿ 10 ಪಟ್ಟು ಹೆಚ್ಚು ಮೊತ್ತಕ್ಕೆ ಟಿಕೆಟ್‌ಗಳ ಮಾರಾಟ. ಬದ್ಧವೈರಿಗಳ ಪಂದ್ಯಕ್ಕೆ ಜಗತ್ತಿನಾದ್ಯಂತ ಕಾಯುತ್ತಿದ್ದಾರೆ ಫ್ಯಾನ್ಸ್‌.

ನವದೆಹಲಿ: ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಕ್ಕೆ ಇನ್ನು 2 ವಾರಕ್ಕಿಂತ ಕಡಿಮೆ ಸಮಯ ಉಳಿದಿದೆ. ಈಗಾಗಲೇ ಐಸಿಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪಂದ್ಯದ ಬಹುತೇಕ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದರೂ, ಕಾಳಸಂತೆಯಲ್ಲಿ ಹಾಗೂ ಥರ್ಡ್‌ ಪಾರ್ಟಿ ವೆಬ್‌ಸೈಟ್‌ (ಅನಿಧಿಕೃತ)ಗಳಲ್ಲಿ ಟಿಕೆಟ್‌ಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ.

ಜೂ.9ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಪಂದ್ಯದ ಟಿಕೆಟ್‌ಗಳು ಅಸಲಿ ಮೌಲ್ಯಕ್ಕಿಂತ 5ರಿಂದ 10 ಪಟ್ಟು ಹೆಚ್ಚು ಮೊತ್ತಕ್ಕೆ ಮಾರಾಟವಾಗುತ್ತಿವೆ. ಪಂದ್ಯದ ಟಿಕೆಟ್‌ಗಳನ್ನು ಮುಂಚಿತವಾಗಿಯೇ ಖರೀದಿಸಿದ್ದವರು ಅನಧಿಕೃತ ಟಿಕೆಟ್‌ ಮಾರಾಟ ವೆಬ್‌ಸೈಟ್‌ಗಳಲ್ಲಿ ಟಿಕೆಟ್‌ ಮಾರಾಟಕ್ಕಿಟ್ಟಿದ್ದಾರೆ. 15000ರಿಂದ 20000 ರು. ಮೌಲ್ಯದ ಟಿಕೆಟ್‌ಗಳು ಕನಿಷ್ಠ 1.1 ಲಕ್ಷ ರು.ಗೆ ಮಾರಾಟವಾಗುತ್ತಿವೆ. ಐಸಿಸಿ ಅಧಿಕೃತ ವೆಬ್‌ಸೈಟ್‌ನಲ್ಲಿ 2000-2750 ಅಮೆರಿಕನ್‌ ಡಾಲರ್‌ (ಅಂದಾಜು 1.6 ಲಕ್ಷ ರು.-2.29 ಲಕ್ಷ ರು.) ಮೌಲ್ಯದ ಕೆಲವೇ ಕೆಲವು ಟಿಕೆಟ್‌ಗಳಷ್ಟೇ ಲಭ್ಯವಿದ್ದು, ಈ ಟಿಕೆಟ್‌ಗಳಿಗೆ ಅನಧಿಕೃತ ವೆಬ್‌ಸೈಟ್‌ಗಳಲ್ಲಿ 8.6 ಲಕ್ಷ ರು. ಬೆಲೆ ನಿಗದಿಪಡಿಸಲಾಗಿದೆ. ಬೇಸ್‌ಬಾಲ್‌ ಟಿಕೆಟ್‌ಗಿಂತ ದುಬಾರಿ!

ಅಮೆರಿಕದ ಅತ್ಯಂತ ಜನಪ್ರಿಯ ಕ್ರೀಡೆಯಾದ ಬೇಸ್‌ಬಾಲ್‌ನ ನ್ಯೂಯಾರ್ಕ್‌ ಯ್ಯಾನ್ಕೀಸ್‌-ಬೋಸ್ಟನ್‌ ರೆಡ್‌ ಸಾಕ್ಸ್ ತಂಡಗಳ ನಡುವಿನ ಪಂದ್ಯ ಭಾರತ-ಪಾಕ್‌ ಪಂದ್ಯದಷ್ಟೇ ಮಹತ್ವ ಪಡೆದಿದೆ. ಈ ಬದ್ಧವೈರಿಗಳ ನಡುವಿನ ಪಂದ್ಯದ ಟಿಕೆಟ್‌ನ ಗರಿಷ್ಠ ಮೊತ್ತಕ್ಕಿಂತ ಭಾರತ-ಪಾಕ್‌ ಪಂದ್ಯದ ಟಿಕೆಟ್‌ನ ಕನಿಷ್ಠ ಮೊತ್ತ ಹೆಚ್ಚು. ಯಾನ್ಕೀಸ್‌ ಹಾಗೂ ರೆಡ್‌ ಸಾಕ್ಸ್‌ ನಡುವೆ ಜೂ.15ರಂದು ಪಂದ್ಯವಿದ್ದು, ಈ ಪಂದ್ಯದ ಟಿಕೆಟ್‌ನ ಗರಿಷ್ಠ ಬೆಲೆ 1028 ಅಮೆರಿಕನ್‌ ಡಾಲರ್‌ (ಅಂದಾಜು 1.07 ಲಕ್ಷ ರು.) ಆದರೆ, ಭಾರತ-ಪಾಕ್‌ ಪಂದ್ಯದ ಟಿಕೆಟ್‌ನ ಕನಿಷ್ಠ ದರವೇ 1.1 ಲಕ್ಷ ರು. ಇದೆ.