ಮಂಗಳೂರು- ಉಡುಪಿಯಲ್ಲಿ ಶೀಘ್ರದಲ್ಲೇ ರಾಜ್ಯ ಹಿರಿಯರ ಒಲಿಂಪಿಕ್ಸ್‌: ಡಾ.ಗೋವಿಂದರಾಜು

| Published : Nov 20 2024, 12:34 AM IST

ಸಾರಾಂಶ

ಜನವರಿ-ಫೆಬ್ರವರಿಯಲ್ಲಿ ಕ್ರೀಡಾಕೂಟ ನಡೆಯುವ ಸಾಧ್ಯತೆ ಇದೆ. 3ನೇ ಆವೃತ್ತಿಯ ಮಿನಿ ಒಲಿಂಪಿಕ್ಸ್‌ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು 2025 ಜನವರಿ-ಫೆಬ್ರವರಿಯಲ್ಲಿ ರಾಜ್ಯ ಹಿರಿಯರ ಒಲಿಂಪಿಕ್‌ ಕ್ರೀಡಾಕೂಟವನ್ನು ಉಡುಪಿ-ಮಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ (ಕೆಒಎ) ಅಧ್ಯಕ್ಷ ಡಾ.ಕೆ.ಗೋವಿಂದರಾಜು ‘ಕನ್ನಡಪ್ರಭ’ಕ್ಕೆ ತಿಳಿಸಿದರು. ಮಂಗಳವಾರ ಪತ್ರಿಕೆಯೊಂದಿಗೆ ಮಾತನಾಡಿದ ಡಾ.ಗೋವಿಂದರಾಜು ಅವರು, ‘ಕ್ರೀಡಾಕೂಟಕ್ಕೆ ರಾಜ್ಯ ಸರ್ಕಾರದ ಒಪ್ಪಿಗೆ ಸಿಕ್ಕಿದ್ದು, ಮಂಗಳೂರು-ಉಡುಪಿ ನಗರಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಜನವರಿ-ಫೆಬ್ರವರಿಯಲ್ಲಿ ಕ್ರೀಡಾಕೂಟ ನಡೆಯುವ ಸಾಧ್ಯತೆ ಇದೆ. 3ನೇ ಆವೃತ್ತಿಯ ಮಿನಿ ಒಲಿಂಪಿಕ್ಸ್‌ ಯಶಸ್ವಿಯಾಗಿ ನಡೆಯುತ್ತಿದ್ದು, ಹಿರಿಯರ ಒಲಿಂಪಿಕ್ಸ್‌ಗೂ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.ಬಾಸ್ಕೆಟ್‌ಬಾಲ್‌: ಮೈಸೂರು, ಎಂಸಿಎಚ್‌ಸಿಗೆ ಚಿನ್ನಕನ್ನಡಪ್ರಭ ವಾರ್ತೆ ಬೆಂಗಳೂರು

3ನೇ ಆವೃತ್ತಿಯ ಕರ್ನಾಟಕ ಮಿನಿ ಒಲಿಂಪಿಕ್ಸ್‌ನ ಬಾಸ್ಕೆಟ್‌ಬಾಲ್‌ನಲ್ಲಿ ಮೈಸೂರು ಹಾಗೂ ಎಂಸಿಎಚ್‌ಸಿ ತಂಡಗಳು ಕ್ರಮವಾಗಿ ಬಾಲಕಿಯರ ಹಾಗೂ ಬಾಲಕರ ವಿಭಾಗದಲ್ಲಿ ಚಾಂಪಿಯನ್‌ ಎನಿಸಿಕೊಂಡಿವೆ.

ಬಾಲಕಿಯರ ವಿಭಾಗದಲ್ಲಿ ಬೀಗಲ್ಸ್‌ ಬಿಸಿ ಬೆಳ್ಳಿ, ಯಂಗೋರಿಯನ್ಸ್‌ ಕಂಚು ಜಯಿಸಿತು. ಬಾಲಕರ ವಿಭಾಗದ ಬೆಳ್ಳಿ ಪಿಸಿಸಿ ಬಾಯ್ಸ್‌ ತಂಡಕ್ಕೆ ಸಿಕ್ಕರೆ, ಮೈಸೂರು ತಂಡ ಕಂಚಿಗೆ ತೃಪ್ತಿಪಟ್ಟುಕೊಂಡಿತು.ಇನ್ನು, ಅಥ್ಲೆಟಿಕ್ಸ್‌ನ ಬಾಲಕರ 200 ಮೀ. ರೇಸ್‌ನಲ್ಲಿ ಮಂಗಳೂರಿನ ಇಯಾನ್‌ ಅಮನ್ನಾ ಚಿನ್ನ, ಉಡುಪಿಯ ಈರಣ್ಣ ಬೆಳ್ಳಿ ಗೆದ್ದರು. ಬಾಲಕಿಯರ 200 ಮೀ. ವಿಭಾಗದಲ್ಲಿ ದಕ್ಷಿಣ ಕನ್ನಡದ ಸಂಹಿತಾ ರಾವ್‌ ಚಿನ್ನ, ಮೈಸೂರಿನ ನಿಶ್ಚಿತಾ ಹಾಗೂ ಮಾನಿಕಾ ಕ್ರಮವಾಗಿ ಬೆಳ್ಳಿ, ಕಂಚು ಪಡೆದರು. 600 ಮೀ. ರೇಸ್‌ನಲ್ಲಿ ಮೈಸೂರಿಯನ ಅಜಯ್‌, ಬೆಳಗಾವಿಯ ಗೌರಿ ಚಿನ್ನ ಗೆದ್ದರು. ಬಾಲಕರ ಲಾಂಗ್‌ಜಂಪ್‌ನಲ್ಲಿ ಉಡುಪಿಯ ಮಿಹಿರ್‌, ಜಾವೆಲಿನ್‌ನಲ್ಲಿ ತುಮಕೂರಿನ ಚಿರಾಗ್‌, ಬಾಲಕಿಯರ ಶಾಟ್‌ಪುಟ್‌ನಲ್ಲಿ ಬೆಂಗಳೂರಿನ ತೇಜಸ್ವಿನಿ ಬಂಗಾರದ ಸಾಧನೆ ಮಾಡಿದರು.

4*100 ಮೀ. ರಿಲೇ ಓಟದ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ, ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡ ಚಾಂಪಿಯನ್‌ ಎನಿಸಿಕೊಂಡಿತು.

ಇಂದು ಕ್ರೀಡಾಕೂಟಕ್ಕೆ ತೆರೆ

ನ.14ರಂದು ಆರಂಭಗೊಂಡಿದ್ದ ಕ್ರೀಡಾಕೂಟಕ್ಕೆ ಬುಧವಾರ ತೆರೆ ಬೀಳಲಿದೆ. ಕಂಠೀರವ ಕ್ರೀಡಾಂಗಣದಲ್ಲಿ ಅದ್ಧೂರಿ ಸಮಾರೋಪ ಸಮಾರಂಭ ನಡೆಯಲಿದೆ. ರಾಜ್ಯ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜು, ಗೃಹ ಸಚಿವ ಪರಮೇಶ್ವರ್‌, ಸಚಿವ ಎಂ.ಸಿ.ಸುಧಾಕರ್‌, ಮಧು ಬಂಗಾರಪ್ಪ, ಸಂಸದ ಪಿ.ಸಿ.ಮೋಹನ್‌, ಶಾಸಕ ರಿಜ್ವಾನ್‌ ಅರ್ಷದ್‌ ಸೇರಿದಂತೆ ಪ್ರಮುಖರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.