ಸಾರಾಂಶ
ಡೆರ್ರಾಡೂನ್: ಉತ್ತರಾಖಂಡದಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಮೇಲೆ ಫಿಕ್ಸಿಂಗ್ ಕರಿನೆರಳು ಬಿದ್ದಿದೆ. ಟೆಕ್ವಾಂಡೋ ಸ್ಪರ್ಧೆಗಳು ಫಿಕ್ಸ್ ಆಗಿದ್ದು, 16 ವಿಭಾಗಗಳ ಪೈಕಿ 10ರಲ್ಲಿ ಸ್ಪರ್ಧೆ ನಡೆಯುವ ಮೊದಲೇ ಪದಕಗಳು ಯಾರಿಗೆ ಸಿಗಬೇಕು ಎನ್ನುವುದು ನಿರ್ಧಾರವಾಗಿದೆ ಎನ್ನುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಟೆಕ್ವಾಂಡೋ ಸ್ಪರ್ಧೆಗಳ ನಿರ್ದೇಶಕರಾಗಿ ನೇಮಕಗೊಂಡಿದ್ದ ಟಿ. ಪ್ರವೀಣ್ ಕುಮಾರ್, ತಮಗೆ ಬೇಕಾದ ರೆಫ್ರಿ ಹಾಗೂ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ. ಕ್ರೀಡೆಗೆ ಸಂಬಂಧಪಡದ ಕೆಲ ವ್ಯಕ್ತಿಗಳೂ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಚಿನ್ನದ ಪದಕಕ್ಕೆ ₹3 ಲಕ್ಷ , ಬೆಳ್ಳಿಗೆ ₹2 ಲಕ್ಷ, ಕಂಚಿಗೆ ₹1 ಲಕ್ಷ ಲಂಚ ಪಡೆಯಲಾಗಿದೆ ಎನ್ನಲಾಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ, ರಾಷ್ಟ್ರೀಯ ಗೇಮ್ಸ್‌ನ ತಾಂತ್ರಿಕ ಸಮಿತಿ ಟೆಕ್ವಾಂಡೋ ಸ್ಪರ್ಧೆಗಳಿಗೆ ಹೊಸ ನಿರ್ದೇಶಕರನ್ನು ನೇಮಿಸಿದ್ದು, ಕನಿಷ್ಠ ಅರ್ಧದಷ್ಟು ರೆಫ್ರಿ, ಅಧಿಕಾರಿಗಳನ್ನು ಬದಲಿಸುವಂತೆ ಹೊಸ ನಿರ್ದೇಶಕ ದಿನೇಶ್ ಕುಮಾರ್‌ಗೆ ಸೂಚಿಸಿದೆ. ಅಲ್ಲದೇ, ಎಲ್ಲಾ ಪಂದ್ಯಗಳನ್ನು ವಿಡಿಯೋ ರೆಕಾರ್ಡ್ ಮಾಡಲು ನಿರ್ಧರಿಸಲಾಗಿದೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ ತಾಂತ್ರಿಕ ಸಮಿತಿಯ ನಿರ್ಧಾರವನ್ನು ಸ್ವಾಗತಿಸಿದ್ದಾರೆ.