ಗಾಯದ ನಡುವೆಯೇ ವಿಶ್ವಕಪ್‌ ಆಡಿದ್ದ ವೇಗಿ ಶಮಿಗೆ ಲಂಡನ್‌ನಲ್ಲಿ ಮೊಣಕಾಲಿನ ಸರ್ಜರಿ

| Published : Feb 28 2024, 02:31 AM IST

ಸಾರಾಂಶ

ಸರ್ಜರಿಗೆ ಒಳಗಾಗಿರುವ ಮೊಹಮದ್‌ ಶಮಿ ಆದಷ್ಟು ಬೇಗ ಚೇತರಿಕೆ ಕಂಡು, ಟೀಂ ಇಂಡಿಯಾಗೆ ವಾಪಸಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟರ್‌ನಲ್ಲಿ ಹಾರೈಸಿದ್ದಾರೆ.

ನವದೆಹಲಿ: ಭಾರತದ ತಾರಾ ವೇಗಿ ಮೊಹಮದ್‌ ಶಮಿ ಸೋಮವಾರ ಲಂಡನ್‌ನಲ್ಲಿ ಎಡಗಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮುಂಬರುವ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಅವರು ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲೂ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ. 33 ವರ್ಷದ ಶಮಿ ಕಳೆದ ವರ್ಷ ನ.19ರಂದು ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್‌ ಫೈನಲ್‌ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಶಮಿ ಆದಷ್ಟು ಬೇಗ ಚೇತರಿಕೆ ಕಂಡು, ಟೀಂ ಇಂಡಿಯಾಗೆ ವಾಪಸಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟರ್‌ನಲ್ಲಿ ಹಾರೈಸಿದ್ದಾರೆ.ಕೊನೆಗೂ ರಣಜಿಗೆ ಶ್ರೇಯಸ್‌: ಮುಂಬೈ ತಂಡಕ್ಕೆ ಸೇರ್ಪಡೆ

ಮುಂಬೈ: ಭಾರತ ತಂಡದಿಂದ ಹೊರಗಿದ್ದ ಹೊರತಾಗಿಯೂ ದೇಸಿ ಕ್ರಿಕೆಟ್‌ನಲ್ಲಿ ಆಡದೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ತಾರಾ ಆಟಗಾರ ಶ್ರೇಯಸ್‌ ಅಯ್ಯರ್‌ ಕೊನೆಗೂ ರಣಜಿ ಟ್ರೋಫಿ ಆಡಲು ನಿರ್ಧರಿಸಿದ್ದಾರೆ. ಮಂಗಳವಾರ ತಮಿಳುನಾಡು ವಿರುದ್ಧದ ರಣಜಿ ಸೆಮಿಫೈನಲ್‌ನಗೆ ಮುಂಬೈ ತಂಡ ಪ್ರಕಟಗೊಂಡಿದ್ದು, ಶ್ರೇಯಸ್‌ ಕೂಡಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಬೆನ್ನು ನೋವಿನಿಂದಾಗಿ ಶ್ರೇಯಸ್‌ ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯದ ಬಳಿಕ ತಂಡದಿಂದ ಹೊರಬಿದ್ದಿದ್ದರು. ಬಳಿಕ ಎನ್‌ಸಿಎಗೆ ಆಗಮಿಸಿ ಪುನಶ್ಚೇತನ ಶಿಬಿರಕ್ಕೆ ಹಾಜರಾಗಿದ್ದ ಅವರು ಗುಣಮುಖರಾಗಿ ಮರಳಿದ್ದರು. ಆದರೆ ಮುಂಬೈ ಪರ ರಣಜಿ ಆಡದೆ ವಿಶ್ರಾಂತಿಯಲ್ಲಿದ್ದರು.