ಸಾರಾಂಶ
17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಲಿರುವ ಭಾರತೀಯ ಆಟಗಾರರ ಪೈಕಿ ಅರ್ಧಕರ್ಧ ಜನ ರಣಜಿ ಟ್ರೋಫಿಯಲ್ಲಿ ಆಡಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. 165 ಆಟಗಾರರ ಪೈಕಿ 56 ಮಂದಿ 2023-24ರಲ್ಲಿ ಒಂದೂ ರಣಜಿ ಪಂದ್ಯವಾಡಿಲ್ಲ. ಇನ್ನು 25 ಮಂದಿ ಕೇವಲ ಒಂದು ಪಂದ್ಯವಾಡಿದ್ದಾರೆ.
ನವದೆಹಲಿ: ರಣಜಿ ಟ್ರೋಫಿಯಲ್ಲಿ ಆಡದೆ ಆಟಗಾರರು ಕೇವಲ ಐಪಿಎಲ್ ಕಡೆಗಷ್ಟೇ ಹೆಚ್ಚು ಪ್ರಾಮುಖ್ಯತೆ ನೀಡುವುದಕ್ಕೆ ಕಡಿವಾಣ ಹಾಕಲು ಬಿಸಿಸಿಐ ಹೊಸ ನಿಯಮವನ್ನು ಜಾರಿ ಮಾಡಲು ಚಿಂತನೆ ನಡೆಸಿದೆ ಎಂದು ಕೆಲ ದಿನಗಳ ಹಿಂದಷ್ಟೇ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರ ಬೆನ್ನಲ್ಲೇ ಆಘಾತಕಾರಿ ಅಂಕಿ-ಅಂಶವೊಂದು ಹೊರಬಿದ್ದಿದ್ದು, 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಲಿರುವ ಭಾರತೀಯ ಆಟಗಾರರ ಪೈಕಿ ಅರ್ಧಕರ್ಧ ಜನ ರಣಜಿ ಟ್ರೋಫಿಯಲ್ಲಿ ಆಡಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಈ ವರ್ಷ ಐಪಿಎಲ್‌ನಲ್ಲಿ 10 ವಿವಿಧ ತಂಡಗಳಲ್ಲಿ ಭಾರತದ ಒಟ್ಟು 165 ಆಟಗಾರರು ಇದ್ದಾರೆ. ಈ ಪೈಕಿ
56 ಮಂದಿ 2023-24ರ ದೇಸಿ ಕ್ರಿಕೆಟ್ ಋತುವಿನಲ್ಲಿ ಒಂದೂ ರಣಜಿ ಪಂದ್ಯವಾಡಿಲ್ಲ. ಇನ್ನು 25 ಮಂದಿ ಕೇವಲ ಒಂದು ಪಂದ್ಯವಾಡಿದ್ದಾರೆ. ರಣಜಿ ಪಂದ್ಯಗಳನ್ನು ಆಡಿದರಷ್ಟೇ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲು ಸಾಧ್ಯ ಎನ್ನುವ ನಿಯಮವನ್ನು ಬಿಸಿಸಿಐ ಸದ್ಯದಲ್ಲೇ ಪರಿಚಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.----
ಐಪಿಎಲ್‌ನಿಂದ ಹಿಂದೆ ಸರಿದ ಆ್ಯಡಂ ಜಂಪಾನವದೆಹಲಿ: ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ 17ನೇ ಆವೃತ್ತಿಯ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣಗಳಿಂದ ತಾವು ಟೂರ್ನಿಯಲ್ಲಿ ಆಡುವುದಿಲ್ಲ ಎಂದಿದ್ದು, ರಾಜಸ್ಥಾನ ರಾಯಲ್ಸ್‌ಗೆ ಹಿನ್ನಡೆಯಾಗಿದೆ. ಆಟಗಾರರ ಹರಾಜಿಗೂ ಮುನ್ನ ಜಂಪಾ ಅವರನ್ನು 1.5 ಕೋಟಿ ರು.ಗೆ ರಾಯಲ್ಸ್ ತನ್ನ ತಂಡದಲ್ಲೇ ಉಳಿಸಿಕೊಂಡಿತ್ತು. ಕಳೆದ ಆವೃತ್ತಿಯಲ್ಲಿ ಜಂಪಾ 6 ಪಂದ್ಯಗಳನ್ನಾಡಿ 8 ವಿಕೆಟ್ ಕಿತ್ತಿದ್ದರು.