ಶ್ರೇಯಾಂಕ ತಮ್ಮ ಐಕಾನ್‌ ವಿರಾಟ್‌ ಕೊಹ್ಲಿ ಅವರನ್ನು ಭೇಟಿಯಾದ ಬಗ್ಗೆ ಶ್ರೇಯಾಂಕ ಸಾಮಾಜಿಕ ತಾಣದಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಜೊತೆ ನಿಂತಿರುವ ಫೋಟೋವನ್ನೂ ಅವರು ಸಾಮಾಜಿಕ ತಾಣಗಳಲ್ಲಿ ಶೇರ್‌ ಮಾಡಿದ್ದಾರೆ.

ನವದೆಹಲಿ: ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ತಂಡ ಚಾಂಪಿಯನ್‌ ಆದ ಕೇವಲ 2 ದಿನಗಳಲ್ಲಿ ಕರ್ನಾಟಕದ ತಾರಾ ಆಟಗಾರ್ತಿ ಶ್ರೇಯಾಂಕ ಪಾಟೀಲ್‌ ಅವರ ಇನ್‌ಸ್ಟಾಗ್ರಾಂ ಹಿಂಬಾಲಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 

ಇತ್ತೀಚೆಗಷ್ಟೇ ಕೊನೆಗೊಂಡ ಡಬ್ಲ್ಯುಪಿಎಲ್‌ನಲ್ಲಿ ಶ್ರೇಯಾಂಕ ಅಭೂತಪೂರ್ವ ಪ್ರದರ್ಶನ ನೀಡಿದ್ದರು. ಟೂರ್ನಿಯುದ್ದಕ್ಕೂ ಬೌಲಿಂಗ್‌ನಲ್ಲಿ ಮೊನಚು ದಾಳಿ ಸಂಘಟಿಸಿ ಪರ್ಪಲ್‌ ಕ್ಯಾಪ್‌ ಪಡೆದಿದ್ದ 21ರ ಶ್ರೇಯಾಂಕ ಆರ್‌ಸಿಬಿ ತಂಡ ಕಪ್‌ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು. 

ಈ ಮೂಲಕ ಯುವ ಜನರ ಮನಸ್ಸು ಗೆದ್ದಿರುವ ಶ್ರೇಯಾಂಕ ಅವರು ಒಂದೇ ದಿನದಲ್ಲಿ 15 ಲಕ್ಷಕ್ಕೂ ಹೆಚ್ಚು ಹೊಸ ಫಾಲೋವರ್ಸ್‌ಗಳನ್ನು ಪಡೆದಿದ್ದು, ಸದ್ಯ ಇನ್‌ಸ್ಟಾದಲ್ಲಿ 21 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. 

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೂಡಾ ಇಷ್ಟೇ ಸಂಖ್ಯೆಯ ಹಿಂಬಾಲಕರನ್ನು ಹೊಂದಿದ್ದಾರೆ. ಆರ್‌ಸಿಬಿ ನಾಯಕಿ ಸ್ಮೃತಿ ಮಂಧನಾಗೆ 1.06 ಕೋಟಿ ಫಾಲೋವರ್ಸ್‌ಗಳಿದ್ದಾರೆ.

ಇನ್ನು, ತಮ್ಮ ಐಕಾನ್‌ ವಿರಾಟ್‌ ಕೊಹ್ಲಿ ಅವರನ್ನು ಭೇಟಿಯಾದ ಬಗ್ಗೆ ಶ್ರೇಯಾಂಕ ಸಾಮಾಜಿಕ ತಾಣದಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ. ತಮ್ಮ ಹೆಸರು ಕೊಹ್ಲಿಗೆ ಗೊತ್ತಿದೆ ಎಂದು ಹೇಳಿರುವ ಶ್ರೇಯಾಂಕ, ತಮ್ಮ ಬೌಲಿಂಗ್‌ಗೆ ಕೊಹ್ಲಿ ಮೆಚ್ಚುಗೆ ಸೂಚಿಸಿದ್ದಾಗಿಯೂ ತಿಳಿಸಿದ್ದಾರೆ. ತಾವು ವಿರಾಟ್‌ ಕೊಹ್ಲಿ ಜೊತೆ ನಿಂತಿರುವ ಫೋಟೋವನ್ನೂ ಅವರು ಸಾಮಾಜಿಕ ತಾಣಗಳಲ್ಲಿ ಶೇರ್‌ ಮಾಡಿದ್ದಾರೆ.