ಸಾರಾಂಶ
ದೇಸಿ ಕ್ರಿಕೆಟನ್ನು ಕಡೆಗಣಿಸಿದ್ದ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಈಗ ಸರಿದಾರಿಗೆ. ಭಾರತ ತಂಡದಲ್ಲಿ ಮತ್ತೆ ಕಾಯಂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿ ಇಬ್ಬರೂ ಆಟಗಾರರು.
ನವದೆಹಲಿ: ಬಿಸಿಸಿಐ ಮಾತು ಧಿಕ್ಕರಿಸಿ ದೇಸಿ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್‌ಗೆ ಬಿಸಿ ತಟ್ಟಿದ್ದು, ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ಬಿಸಿಸಿಐ ಮಾತು ಕೇಳಬೇಕು ಎನ್ನುವ ಅರಿವಾಗಿದೆ. ಕಳೆದ ಋತುವಿನ ರಣಜಿ ಟ್ರೋಫಿಯಲ್ಲಿ ಆಡುವಂತೆ ಸೂಚಿಸಿದ್ದರೂ, ಮಾತು ಕೇಳದೆ ಐಪಿಎಲ್ ತಯಾರಿಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಈ ಬಾರಿ ತಮಿಳುನಾಡು ಕ್ರಿಕೆಟ್ ಸಂಸ್ಥೆ ಆಯೋಜಿಸಲಿರುವ ಬುಚ್ಚಿ ಬಾಬು ಆಹ್ವಾನಿತ ಪ್ರಥಮ ದರ್ಜೆ ಟೂರ್ನಿಯಲ್ಲಿ ಆಡಲಿದ್ದಾರೆ. ಶ್ರೇಯಸ್ ಮುಂಬೈ ತಂಡದ ಪರ ಆಡಲಿದ್ದು, ಇಶಾನ್ ಜಾರ್ಖಂಡ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಶ್ರೇಯಸ್ ಹಾಗೂ ಕಿಶನ್ ಇಬ್ಬರನ್ನೂ ಬಿಸಿಸಿಐ ತನ್ನ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಹೊರಗಿಟ್ಟಿದ್ದು, ಟಿ20 ವಿಶ್ವಕಪ್‌ಗೂ ಕಡೆಗಣಿಸಿತ್ತು. ಕೆಕೆಆರ್ ತಂಡ ಬಿಟ್ಟು ಗಂಭೀರ್ ಭಾರತ ತಂಡದ ಕೋಚ್ ಆಗಿ ಬಂದ ಮೇಲೆ, ಕೆಕೆಆರ್ ನಾಯಕ ಶ್ರೇಯಸ್‌ರನ್ನು ಲಂಕಾ ಪ್ರವಾಸಕ್ಕೆ ಆಯ್ಕೆ ಮಾಡಲಾಯಿತು. ಆದರೆ, ಕಿಶನ್ ಬಗ್ಗೆ ಬಿಸಿಸಿಐಗೆ ಈಗಲೂ ಸಮಾಧಾನ ಇಲ್ಲ ಎಂದು ತಿಳಿದುಬಂದಿದೆ.