ಸಾರಾಂಶ
ದುಬೈ: ಭಾರತದ ಬ್ಯಾಟರ್ ಶ್ರೇಯಸ್ ಅಯ್ಯರ್ ಮಂಗಳವಾರ ಐಸಿಸಿ ಮಾರ್ಚ್ ತಿಂಗಳ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾದರು. ಚಾಂಪಿಯನ್ಸ್ ಟ್ರೋಫಿಯಲ್ಲಿ 243 ರನ್ ಸಿಡಿಸಿ, ಭಾರತ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೇಯಸ್, ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಹಾಗೂ ಜೇಕಬ್ ಡಫಿ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗಳಿಸಿದ್ದಾರೆ.
ಆ.17ರಿಂದ ಬಾಂಗ್ಲಾವಿರುದ್ಧ ಭಾರತಕ್ಕೆ
ಏಕದಿನ, ಟಿ20 ಸರಣಿಢಾಕಾ: ಈ ವರ್ಷ ಆಗಸ್ಟ್‌ನಲ್ಲಿ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದು, ತಲಾ 3 ಪಂದ್ಯಗಳ ಏಕದಿನ, ಟಿ20 ಸರಣಿಗಳನ್ನು ಆಡಲಿದೆ. ಆ.13ಕ್ಕೆ ಢಾಕಾ ತಲುಪಲಿರುವ ಭಾರತ ತಂಡ, ಮೊದಲೆರಡು ಏಕದಿನಗಳನ್ನು ಕ್ರಮವಾಗಿ ಆ.17 ಹಾಗೂ ಆ.20ರಂದು ಮೀರ್‌ನಲ್ಲಿ ಆಡಲಿದೆ. ಆ ಬಳಿಕ ಚಟ್ಟೋಗ್ರಾಮ್‌ಗೆ ಪ್ರಯಾಣಿಸಿ, ಅಲ್ಲಿ ಆ.23ಕ್ಕೆ 3ನೇ ಏಕದಿನ, ಏ.26ಕ್ಕೆ ಮೊದಲ ಟಿ20 ಪಂದ್ಯಗಳನ್ನು ಆಡಲಿದೆ. ಆನಂತರ ಮೀರ್‌ಪುರ್‌ಗೆ ವಾಪಸಾಗಿ ಆ.29, ಆ.31ರಂದು ಕ್ರಮವಾಗಿ ಕೊನೆ ಎರಡು ಟಿ20ಗಳನ್ನು ಆಡಲಿದೆ. ಈ ಪ್ರವಾಸವು ಭಾರತ ತಂಡಕ್ಕೆ ಏಷ್ಯಾಕಪ್ ಟಿ20 ಟೂರ್ನಿಗೆ ಸಿದ್ಧತೆ ನಡೆಸಲು ವೇದಿಕೆ ಒದಗಿಸಲಿದೆ.
ಸುದಿರ್‌ಮನ್ ಕಪ್ಗೆಗಾಯತ್ರಿ-ತ್ರೀಸಾ ಇಲ್ಲ
ನವದೆಹಲಿ: ಭಾರತದ ತಾರಾ ಡಬಲ್ಸ್ ಜೋಡಿಯಾದ ಗಾಯತ್ರಿ ಗೋಪಿಚಂದ್ ಹಾಗೂ ತ್ರೀಸಾ ಜಾಲಿ, ಏ.27ರಿಂದ ಮೇ 4ರ ವರೆಗೂ ಚೀನಾದ ಕ್ಸಿಯಾಮೆನ್‌ನಲ್ಲಿ ನಡೆಯಲಿರುವ ಸುದಿರ್‌ಮನ್ ಕಪ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಈ ಇಬ್ಬರು ಆಟಗಾರ್ತಿಯರು ಭುಜದ ನೋವಿನಿಂದ ಬಳಲುತ್ತಿದ್ದಾರೆ. ಈ ವರ್ಷ ಈಗಾಗಲೇ 5 ಟೂರ್ನಿಗಳಲ್ಲಿ ಆಡಿರುವ ಈ ಜೋಡಿ, ಕಳೆದ ವರ್ಷ 22 ಟೂರ್ನಿಗಳಲ್ಲಿ ಪಾಲ್ಗೊಂಡಿತ್ತು. ಟೂರ್ನಿಗೆ 14 ಸದಸ್ಯರ ತಂಡವನ್ನು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಪ್ರಕಟಿಸಿದ್ದು, ಪಿ.ವಿ.ಸಿಂಧು, ಲಕ್ಷ್ಯ ಸೇನ್, ಸಾತ್ವಿಕ್-ಚಿರಾಗ್ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.ಬಗಾನ್ ಫ್ಯಾನ್ಸ್ ಸಿಡಿಸಿದ
ಪಟಾಕಿಯಿಂದ ಬಿಎಫ್ಸಿಮಾಲೀಕ, ಫ್ಯಾನ್ಸ್‌ಗೆ ಗಾಯ
ಬೆಂಗಳೂರು: ಕಳೆದ ವಾರ ನಡೆದ ಮೋಹಾನ್ ಬಗಾನ್ ಸೂಪರ್ ಜೈಂಟ್ ವಿರುದ್ಧದ ಇಂಡಿಯನ್ ಸೂಪರ್ ಲೀಗ್ ಫೈನಲ್ ಪಂದ್ಯದ ವೇಳೆ ಬಗಾನ್ ಅಭಿಮಾನಿಗಳು ಸಿಡಿಸಿದ ಪಟಾಕಿಯಿಂದ ಬಿಎಫ್‌ಸಿ ಅಭಿಮಾನಿಗಳು ಮತ್ತು ಮಾಲೀಕ ಪಾರ್ಥ್ ಜಿಂದಾಲ್‌ಗೆ ಸುಟ್ಟ ಗಾಯಗಳಾಗಿವೆ ಎಂದು ಬೆಂಗಳೂರು ಫುಟ್ಬಾಲ್ ಕ್ಲಬ್ ಹೇಳಿದೆ. ಫೈನಲ್‌ನಲ್ಲಿ ಬಗಾನ್ ತಂಡ ಗೆದ್ದ ವೇಳೆ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಪಟಾಕಿ ಎಸೆದಿದ್ದಾರೆ. ಈ ಸಂದರ್ಭದಲ್ಲಿ ಬಿಎಫ್‌ಸಿ ಅಭಿಮಾನಿ ಕಣ್ಣಿಗೆ ಗಾಯವಾಗಿದೆ. ಮಾತ್ರವಲ್ಲದೇ ಪಾರ್ಥ್ ಜಿಂದಾಲ್ ಸೇರಿದಂತೆ ಕೆಲವರಿಗೆ ಸುಟ್ಟ ಗಾಯಗಳು ಹಾಗೂ ಮೂಗೇಟುಗಳಾಗಿದೆ. ಘಟನೆಯನ್ನು ಬಿಎಫ್‌ಸಿ ಖಂಡಿಸಿದ್ದು, ಈ ಸಂಬಂಧ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್( ಎಐಎಫ್‌ಎಫ್) ಮತ್ತು ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ (ಎಫ್‌ಎಸ್‌ಡಿಎಲ್)ಗೆ ದೂರು ನೀಡಿದೆ.ಭಾರತೀಯ ಬಾಕ್ಸಿಂಗ್
ಸಂಸ್ಥೆಯಲ್ಲಿ ನಿಲ್ಲದ ಕಿತ್ತಾಟನವದೆಹಲಿ: ಭಾರತೀಯ ಬಾಕ್ಸಿಂಗ್ ಫೆಡರೇಶನ್‌ನಲ್ಲಿ ಕಿತ್ತಾಟ ಮುಂದುವರೆದಿದ್ದು, ತಕ್ಷಣವೇ ಚುನಾವಣೆ ನಡೆಸುವಂತೆ ವಿವಿಧ ರಾಜ್ಯ ಘಟಕಗಳ ಸದಸ್ಯರು ಆಗ್ರಹಿಸಿದ್ದಾರೆ. ಈ ನಡುವೆಯೇ ತಾತ್ಕಾಲಿಕ ಆಡಳಿತ ಸಮಿತಿಯು ತರಬೇತುದಾರರ ನೇಮಕಾತಿ ಸೇರಿದಂತೆ ಹಲವು ನಿರ್ಧಾರಗಳನ್ನು ಪ್ರಕಟಿಸಿದೆ. ಭಾರತೀಯ ಬಾಕ್ಸಿಂಗ್ ಫೆಡರೇಶನ್ ಪದಾಧಿಕಾರಿಗಳ ಅಧಿಕಾರವಧಿ ಫೆ.2ರಂದೇ ಕೊನೆಗೊಂಡಿತ್ತು. ಆದರೆ ಕಾನೂನು ವಿವಾದದಿಂದಾಗಿ ಚುನಾವಣೆ ವಿಳಂಬಗೊಂಡಿತ್ತು. ಈ ನಡುವೆ ವಿಶ್ವ ಬಾಕ್ಸಿಂಗ್ ಸಂಸ್ಥೆಯು ತಾತ್ಕಾಲಿಕ ಆಡಳಿತ ಸಮಿತಿ ರಚಿಸಿತ್ತು. ಮಾತ್ರವಲ್ಲದೇ ಹಿಮಾಚಲ ಪ್ರದೇಶ ಹೈಕೋರ್ಟ್ ಇತ್ತೀಚೆಗೆ ಏ.28ರ ಮೊದಲು ಹೊಸ ಚುನಾವಣಾ ವೇಳಾಪಟ್ಟಿಯನ್ನು ಹೊರಡಿಸುವಂತೆ ನಿರ್ದೇಶಿಸಿತ್ತು. ಈ ನಡುವೆಯೇ ತಾತ್ಕಾಲಿಕ ಸಮಿತಿಯು ಸೋಮವಾರ ತನ್ನ ಮೊದಲ ಸಭೆಯನ್ನು ಕರೆದಿದ್ದು ರಾಷ್ಟ್ರೀಯ ತರಬೇತಿ ಶಿಬಿರಗಳಿಗೆ ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ಆಯ್ಕೆಗಳನ್ನು ನೇಮಿಸಲು ನಿರ್ಧಾರ ಕೈಗೊಂಡಿದೆ.