ಮಲೇಷ್ಯಾ ಮಾಸ್ಟರ್ಸ್‌: ಸಿಂಧು ಸೆಮೀಸ್‌ಗೆ, ಸೋತು ಹೊರಬಿದ್ದ ಅಶ್ಮಿತಾ

| Published : May 25 2024, 01:34 AM IST / Updated: May 25 2024, 05:48 AM IST

ಸಾರಾಂಶ

ಕೊನೆ ಸುತ್ತಿನಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಿದ ಸಿಂಧು, ಏಕಮುಖವಾಗಿ ಪಂದ್ಯ ಗೆದ್ದು ಅಂತಿಮ 4ರ ಘಟ್ಟ ಪ್ರವೇಶಿಸಿದರು. ಸೆಮೀಸ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಸಿಂಧುಗೆ ಥಾಯ್ಲೆಂಡ್‌ನ ಬುಸಾನನ್‌ ಸವಾಲು ಎದುರಾಗಲಿದೆ.

ಕೌಲಾಲಂಪುರ: 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತ, ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಮಲೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.ಕಳೆದ 2 ವರ್ಷಗಳಿಂದಲೂ ಪ್ರಶಸ್ತಿ ಬರ ಎದುರಿಸುತ್ತಿರುವ ವಿಶ್ವ ನಂ.15 ಸಿಂಧು, ಶುಕ್ರವಾರ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.6, ಚೀನಾದ ಹ್ಯಾನ್‌ ಯು ವಿರುದ್ಧ 21-13, 14-21, 21-12ರಲ್ಲಿ ಗೆಲುವು ಸಾಧಿಸಿದರು.

 55 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧುಗೆ 2ನೇ ಸುತ್ತಿನಲ್ಲಿ ತೀವ್ರ ಪೈಪೋಟಿ ನೀಡಲು ಹ್ಯಾನ್‌ ಯು ಯಶಸ್ವಿಯಾದರು. ಆದರೆ ಕೊನೆ ಸುತ್ತಿನಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಿದ ಸಿಂಧು, ಏಕಮುಖವಾಗಿ ಪಂದ್ಯ ಗೆದ್ದು ಅಂತಿಮ 4ರ ಘಟ್ಟ ಪ್ರವೇಶಿಸಿದರು. ಸೆಮೀಸ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಸಿಂಧುಗೆ ಥಾಯ್ಲೆಂಡ್‌ನ ಬುಸಾನನ್‌ ಸವಾಲು ಎದುರಾಗಲಿದೆ.

ಇದೇ ವೇಳೆ ಯುವ ಶಟ್ಲರ್‌ ಅಶ್ಮಿತಾ ಚಾಲಿಹಾ ಕ್ವಾರ್ಟರ್‌ನಲ್ಲಿ ಚೀನಾದ ಝಾಂಗ್‌ ಯಿ ಮಾನ್‌ ವಿರುದ್ಧ 10-21, 12-21ರಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು. ಸದ್ಯ ಭಾರತದ ಶಟ್ಲರ್‌ಗಳ ಪೈಕಿ ಸಿಂಧು ಮಾತ್ರ ಕಣದಲ್ಲಿದ್ದಾರೆ.