ಸಾರಾಂಶ
ಕೌಲಾಲಂಪುರ: ಕಳೆದೆರಡು ವರ್ಷಗಳಿಂದ ಪ್ರಶಸ್ತಿ ಬರ ಎದುರಿಸುತ್ತಿರುವ ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
2 ಬಾರಿ ಒಲಿಂಪಿಕ್ಸ್ ಪದಕ ವಿಜೇತ, ವಿಶ್ವ ನಂ.15 ಸಿಂಧು ಅವರು ಶನಿವಾರ 88 ನಿಮಿಷಗಳ ಕಾಲ ನಡೆದ ಮಹಿಳಾ ಸಿಂಗಲ್ಸ್ ರೋಚಕ ಸೆಮಿಫೈನಲ್ ಹಣಾಹಣಿಯಲ್ಲಿ ಮಾಜಿ ವಿಶ್ವ ಚಾಂಪಿಯನ್, ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 13-21, 21-16, 21-12 ಗೇಮ್‌ಗಳಲ್ಲಿ ಜಯಭೇರಿ ಬಾರಿಸಿದರು.
ಮೊದಲ ಗೇಮ್‌ನಲ್ಲಿ ಬುಸಾನನ್ ಪ್ರಾಬಲ್ಯ ಸಾಧಿಸಿದರೂ ಪಟ್ಟುಬಿಡದ ಸಿಂಧು ಕೊನೆ 2 ಗೇಮ್‌ಗಳಲ್ಲಿ ಮೇಲುಗೈ ಸಾಧಿಸಿ ಫೈನಲ್ ಪ್ರವೇಶಿಸಿದರು. ಇದು ಬುಸಾನನ್ ವಿರುದ್ಧ ಸಿಂಧುಗೆ ಲಭಿಸಿದ 18ನೇ ಗೆಲುವು. ಕೊನೆ ಬಾರಿ ಬುಸಾನನ್ ವಿರುದ್ಧ ಸಿಂಧು 2019ರಲ್ಲಿ ಸೋತಿದ್ದರು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಸಿಂಧುಗೆ ವಿಶ್ವ ನಂ.7, ವ್ಯಾಂಗ್ ಝಿ ಯಿ ಸವಾಲು ಎದುರಾಗಲಿದೆ.
2 ವರ್ಷ ಬಳಿಕ ಪ್ರಶಸ್ತಿ ನಿರೀಕ್ಷೆ
ಸಿಂಧು 2022ರಲ್ಲಿ ಸ್ವಿಸ್ ಓಪನ್, ಸಿಂಗಾಪೂರ ಓಪನ್ ಹಾಗೂ ಸೆಯ್ಯದ್ ಮೋದಿ ಇಂಟ್‌ರ್‌ನ್ಯಾಷನಲ್ ಟೂರ್ನಿಯಲ್ಲಿ ಗೆದ್ದಿದ್ದರು. ಆ ಬಳಿಕ ಯಾವುದೇ ಟೂರ್ನಿಯಲ್ಲಿ ಚಾಂಪಿಯನ್ ಆಗಿಲ್ಲ. ಕಳೆದ ವರ್ಷ ಸ್ಪೇನ್ ಮಾಸ್ಟರ್ಸ್ ಫೈನಲ್‌ಗೇರಿ ಸೋತಿದ್ದರು. 2024ರಲ್ಲಿ ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.