ಸಿಂಧುಗೆ ಮತ್ತೆ ಟ್ರೋಫಿ ಮಿಸ್‌: ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ರನ್ನರ್‌-ಅಪ್‌

| Published : May 27 2024, 01:02 AM IST / Updated: May 27 2024, 04:26 AM IST

ಸಾರಾಂಶ

ಕಳೆದ ವರ್ಷ ಅವರು ಮ್ಯಾಡ್ರಿಡ್‌ ಸ್ಪೇನ್‌ ಮಾಸ್ಟರ್ಸ್‌ನಲ್ಲಿ ರನ್ನರ್‌-ಅಪ್‌ ಆಗಿದ್ದರು. ಈ ವರ್ಷ ಮೊದಲ ಸಲ ಫೈನಲ್‌ ಪ್ರವೇಶಿಸಿದ್ದ ಸಿಂಧುಗೆ ಪ್ರಶಸ್ತಿ ಗೆಲ್ಲಲು ಆಗಲಿಲ್ಲ.

ಕೌಲಾ ಲಂಪುರ: 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತ ಭಾರತದ ತಾರಾ ಶಟ್ಲರ್‌ ಪಿ.ವಿ. ಸಿಂಧು ಅವರ 2 ವರ್ಷಗಳ ಬಳಿಕ ಬಿಡಬ್ಲ್ಯುಎಫ್‌ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿದೆ. ಭಾನುವಾರ ವಿಶ್ವ ನಂ.15 ಸಿಂಧು ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಸೋತು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಮಾಜಿ ವಿಶ್ವ ಚಾಂಪಿಯನ್‌ ಸಿಂಧು ಅವರು ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ವಿಶ್ವ ನಂ.7, ಚೀನಾದ ವ್ಯಾಂಗ್‌ ಝಿ ಯಿ ವಿರುದ್ಧ 21-16, 5-21, 16-21ರಲ್ಲಿ ಸೋಲನುಭವಿಸಿದರು. 

ಮೊದಲ ಗೇಮ್‌ ಗೆದ್ದು, ನಿರ್ಣಾಯಕ 3ನೇ ಗೇಮ್‌ನಲ್ಲಿ ಒಂದು ಹಂತದಲ್ಲಿ 11-3ರಿಂದ ಮುಂದಿದ್ದ ಸಿಂಧು ಬಳಿಕ ಆಘಾತಕಾರಿ ಸೋಲಿನೊಂದಿಗೆ ಪ್ರಶಸ್ತಿ ಕೈಚೆಲ್ಲಿದರು. ಸಿಂಧು 2022ರಲ್ಲಿ ಸಿಂಗಾಪೂರ ಓಪನ್‌, ಬಳಿಕ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ಗೆದ್ದಿದ್ದರು. ಆ ಬಳಿಕ ಯಾವುದೇ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ ವರ್ಷ ಅವರು ಮ್ಯಾಡ್ರಿಡ್‌ ಸ್ಪೇನ್‌ ಮಾಸ್ಟರ್ಸ್‌ನಲ್ಲಿ ರನ್ನರ್‌-ಅಪ್‌ ಆಗಿದ್ದರು. ಈ ವರ್ಷ ಮೊದಲ ಸಲ ಫೈನಲ್‌ ಪ್ರವೇಶಿಸಿದ್ದ ಸಿಂಧುಗೆ ಪ್ರಶಸ್ತಿ ಗೆಲ್ಲಲು ಆಗಲಿಲ್ಲ.