ಸಾರಾಂಶ
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುತ್ತಿರುವ 3ನೇ ಆವೃತ್ತಿ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಮೊದಲ ಗೆಲುವು ದಾಖಲಿಸಿತು.
ಆರಂಭಿಕ 2 ಪಂದ್ಯಗಳಲ್ಲಿ ಸೋತಿದ್ದ ತಂಡ ಭಾನುವಾರ ಮೈಸೂರು ವಾರಿಯರ್ಸ್ ವಿರುದ್ಧ 3 ವಿಕೆಟ್ ರೋಚಕ ಜಯಗಳಿಸಿತು. ಮೈಸೂರಿಗೆ ಟೂರ್ನಿಯಲ್ಲಿ ಇದು ಸತತ 2ನೇ ಸೋಲು. ಆರಂಭಿಕ ಪಂದ್ಯದಲ್ಲಿ ತಂಡ ಗೆದ್ದಿದ್ದರೂ ಬಳಿಕ ಸೋಲಿನ ಮುಖಭಂಗಕ್ಕೊಳಗಾಗುತ್ತಿದೆ.ಮೊದಲು ಬ್ಯಾಟ್ ಮಾಡಿದ ಮೈಸೂರು 8 ವಿಕೆಟ್‌ಗೆ 196 ರನ್ ಗಳಿಸಿತು.
ನಾಯಕ ಕರುಣ್ ನಾಯರ್ 35 ಎಸೆತಗಳಲ್ಲಿ 66, ಸುಚಿತ್ 13 ಎಸೆತಗಳಲ್ಲಿ 40 ರನ್ ಸಿಡಿಸಿದರು. ಸುಮಿತ್ ದ್ರಾವಿಡ್ 33 ರನ್ ಕೊಡುಗೆ ನೀಡಿದರು. ಬೃಹತ್ ಗುರಿ ಬೆನ್ನತ್ತಿದ ಗುಲ್ಬರ್ಗಾ ಕೊನೆ ಎಸೆತದಲ್ಲಿ ಬೌಂಡರಿ ಬಾರಿಸಿ ಗೆಲುವು ಒಲಿಸಿಕೊಂಡಿತು. ಸ್ಮರಣ್ ಆರ್. 60 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್‌ನೊಂದಿಗೆ ಔಟಾಗದೆ 104 ರನ್ ಸಿಡಿಸಿದರು. ಪ್ರವೀಣ್ ದುಬೆ 37, ಅನೀಶ್ 24 ರನ್ ಕೊಡುಗೆ ನೀಡಿದರು.
ಇಂದಿನ ಪಂದ್ಯಗಳು
ಬೆಂಗಳೂರು-ಹುಬ್ಬಳ್ಳಿ, ಮಧ್ಯಾಹ್ನ 3ಕ್ಕೆ
ಮೈಸೂರು-ಮಂಗಳೂರು, ಸಂಜೆ 7ಕ್ಕೆ