2ನೇ ಟೆಸ್ಟ್: 2ನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 260/5 ಡಿ., । ಸ್ಟಬ್ಸ್ 94 ರನ್ ಭಾರತಕ್ಕೆ ಗೆಲ್ಲಲು 549 ರನ್ ಬೃಹತ್ ಗುರಿ । 4ನೇ ದಿನದಂತ್ಯಕ್ಕೆ ಭಾರತ 27/2
ಗುವಾಹಟಿ: ಕಳೆದೊಂದು ದಶಕದಲ್ಲಿ ತವರಿನಲ್ಲಿ ಹುಲಿಯಂತಿದ್ದ ಭಾರತ ತಂಡ, ಕಳೆದೊಂದು ವರ್ಷದಲ್ಲಿ ಇಲಿಯಂತಾಗಿದೆ. 12 ತಿಂಗಳ ಅಂತರದಲ್ಲಿ 2ನೇ ಸರಣಿ ವೈಟ್‌ವಾಶ್ ಅನುಭವಿಸುವ ಹೊಸ್ತಿಲಿಗೆ ಬಂದು ನಿಂತಿದ್ದು, ಇದರ ಪರಿಣಾಮ ಕೆಲವರ ತಲೆದಂಡವಾದರೂ ಅಚ್ಚರಿಯಿಲ್ಲ.
ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಭಾರತ ಸೋಲಿನತ್ತ ಮುಖ ಮಾಡಿದೆ. ಭಾರತದ ಮೇಲೆ ಫಾಲೋ ಆನ್ ಹೇರದ ಹರಿಣ ಪಡೆ, 2ನೇ ಇನ್ನಿಂಗ್ಸಲ್ಲಿ 5 ವಿಕೆಟ್‌ಗೆ 260 ರನ್ ಗಳಿಸಿ, ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. 4ನೇ ದಿನವೂ 70 ಓವರ್ ಬ್ಯಾಟ್ ಮಾಡಿದ ದ.ಆಫ್ರಿಕಾ, ಭಾರತಕ್ಕೆ 549 ರನ್‌ಗಳ ಬೃಹತ್ ಗುರಿ ನಿಗದಿಪಡಿಸಿದ್ದು ಮಾತ್ರವಲ್ಲದೇ, ಭಾರತೀಯರನ್ನು ಸುಸ್ತು ಹೊಡೆಸಿತು.ಬೃಹತ್ ಗುರಿ ಬೆನ್ನತ್ತಿರುವ ಭಾರತ, 2ನೇ ಇನ್ನಿಂಗ್ಸಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದೆ. ಆರಂಭಿಕರಾದ ಜೈಸ್ವಾಲ್ (13) ಹಾಗೂ ರಾಹುಲ್ (6) ಪೆವಿಲಿಯನ್ ಸೇರಿದ್ದಾರೆ. ಸಾಯಿ ಸುದರ್ಶನ್ ಹಾಗೂ ರಾತ್ರಿ ಕಾವಲುಗಾರ ಕುಲ್ದೀಪ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕಿದ್ದರೆ ಅಸಾಧಾರಣ ಆಟ ಪ್ರದರ್ಶಿಸಬೇಕಿದೆ.
ಇದಕ್ಕೂ ಮುನ್ನ, ವಿಕೆಟ್ ನಷ್ಟವಿಲ್ಲದೆ 26 ರನ್‌ಗಳಿಂದ 4ನೇ ದಿನವನ್ನು ಆರಂಭಿಸಿದ ದ.ಆಫ್ರಿಕಾ, ನಿರಾಯಾಸವಾಗಿ ರನ್ ಕಲೆಹಾಕಿತು. ರಿಕೆಲ್ಟನ್ 35, ಮಾರ್ಕ್‌ರಮ್ 29 ರನ್ ಗಳಿಸಿದರೆ, ಸ್ಟಬ್ಸ್ 94, ಟೋನಿ 49, ಮುಲ್ಡರ್ ಔಟಾಗದೆ 35 ರನ್ ಕೊಡುಗೆ ನೀಡಿದರು. ಸ್ಕೋರ್: ದ.ಆಫ್ರಿಕಾ 489 ಹಾಗೂ 260/5 ಡಿ., (ಸ್ಟಬ್ಸ್ 94, ಟೋನಿ 49, ಜಡೇಜಾ 4-62), ಭಾರತ 201 ಹಾಗೂ 27/2 (ಜೈಸ್ವಾಲ್ 13, ಕುಲ್ದೀಪ್ 4*, ಸುದರ್ಶನ್ 2*, ಹಾರ್ಮರ್ 1-1, ಯಾನ್ಸನ್ 1-14)