ಟಿ20 ವಿಶ್ವಕಪ್‌: ಡಚ್‌ ಶಾಕ್‌ನಿಂದ ಪಾರಾಗಿ ಗೆದ್ದ ದಕ್ಷಿಣ ಆಫ್ರಿಕಾ!

| Published : Jun 09 2024, 01:44 AM IST / Updated: Jun 09 2024, 03:44 AM IST

ಟಿ20 ವಿಶ್ವಕಪ್‌: ಡಚ್‌ ಶಾಕ್‌ನಿಂದ ಪಾರಾಗಿ ಗೆದ್ದ ದಕ್ಷಿಣ ಆಫ್ರಿಕಾ!
Share this Article
  • FB
  • TW
  • Linkdin
  • Email

ಸಾರಾಂಶ

ನೆದರ್‌ಲೆಂಡ್ಸ್‌ 20 ಓವರಲ್ಲಿ 9 ವಿಕೆಟ್‌ ಕಳೆದುಕೊಂಡು 103 ರನ್‌ ಕಲೆಹಾಕಿತು. ಸುಲಭ ಗುರಿ ಸಿಕ್ಕರೂ ಗೆಲುವು ಸುಲಭದಲ್ಲಿ ಆಫ್ರಿಕಾಕ್ಕೆ ಒಲಿಯಲಿಲ್ಲ. 18.5 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟದಲ್ಲಿ ಜಯ ಗಳಿಸಿತು.

ನ್ಯೂಯಾರ್ಕ್‌: ಈ ಬಾರಿ ಟಿ20 ವಿಶ್ವಕಪ್‌ ಮತ್ತೊಂದು ಆಘಾತಕಾರಿ ಫಲಿತಾಂಶಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದ್ದರೂ, ಅದು ಅಲ್ಪದರಲ್ಲೇ ತಪ್ಪಿದೆ. ಶನಿವಾರ ರಾತ್ರಿ ನೆದರ್‌ಲೆಂಡ್ಸ್‌ ವಿರುದ್ಧ ಸೋಲಿನ ಭೀತಿಯಿಂದ ಪಾರಾಗಿ ದಕ್ಷಿಣ ಆಫ್ರಿಕಾ 4 ವಿಕೆಟ್ ಗೆಲುವು ಸಾಧಿಸಿದೆ. ಆಫ್ರಿಕಾ ಸತತ 2ನೇ ಜಯದೊಂದಿಗೆ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.

ಮೊದಲು ಬ್ಯಾಟ್‌ ಮಾಡಿದ ನೆದರ್‌ಲೆಂಡ್ಸ್ 20 ಓವರಲ್ಲಿ 9 ವಿಕೆಟ್‌ಗೆ 103 ರನ್‌ ಕಲೆಹಾಕಿತು. ಆರಂಭದಲ್ಲೇ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ತಂಡ 48 ರನ್‌ಗೆ 6 ವಿಕೆಟ್‌ ನಷ್ಟಕ್ಕೊಳಗಾಗಿತ್ತು. ಆದರೆ ಕ್ರೀಸ್‌ನಲ್ಲಿ ನೆಲೆಯೂರಿ ಸೈಬ್ರಂಡ್‌ 40, ವ್ಯಾನ್‌ ಬೀಕ್‌ 23 ರನ್‌ ಸಿಡಿಸಿ ತಂಡವನ್ನು 100ರ ಗಡಿ ದಾಟಿಸಿದರು. ಬಾರ್ಟ್‌ಮ್ಯಾನ್‌ 11ಕ್ಕೆ 4 ವಿಕೆಟ್‌ ಕಿತ್ತರು.ಕಡಿಮೆ ಮೊತ್ತವನ್ನು ಸುಲಭದಲ್ಲಿ ಬೆನ್ನತ್ತುವ ದ.ಆಫ್ರಿಕಾ ಯೋಜನೆ ಮೊದಲ ಓವರಲ್ಲೇ ತಲೆಕೆಳಗಾಯಿತು. ಡಿ ಕಾಕ್‌(00), ಹೆಂಡ್ರಿಕ್ಸ್‌(03), ನಾಯಕ ಮಾರ್ಕ್‌ರಮ್‌(00) ಹಾಗೂ ಕ್ಲಾಸೆನ್‌(04) ತಂಡದ ಮೊತ್ತ 12 ಆಗುವಷ್ಟರಲ್ಲೇ ಪೆವಿಲಿಯನ್‌ ಸೇರಿದ್ದರು. ಪವರ್‌-ಪ್ಲೇನಲ್ಲಿ 16, ಮೊದಲ 10 ಓವರಲ್ಲಿ 32 ರನ್‌ ಗಳಿಸಿದ್ದ ತಂಡ ಸೋಲಿನ ಭೀತಿಯಲ್ಲಿತ್ತು. ಆದರೆ ಡೇವಿಡ್‌ ಮಿಲ್ಲರ್‌-ಟ್ರಿಸ್ಟನ್‌ ಸ್ಟಬ್ಸ್‌(33) ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬಂದರು. ಕೊನೆವರೆಗೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆನಿಂತ ಮಿಲ್ಲರ್‌ 51 ಎಸೆತಗಳಲ್ಲಿ ಔಟಾಗದೆ 59 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಸ್ಕೋರ್‌: ನೆದರ್‌ಲೆಂಡ್ಸ್‌ 20 ಓವರಲ್ಲಿ 103/9 (ಸೈಬ್ರಂಡ್‌ 40, ಬಾರ್ಟ್‌ಮ್ಯಾನ್‌ 4-11, ನೋಕಿಯಾ 2-19), ದ.ಆಫ್ರಿಕಾ 18.5 ಓವರಲ್ಲಿ 106/6 (ಮಿಲ್ಲರ್‌ 59*, ಸ್ಟಬ್ಸ್‌ 33, ವಿವಿಯನ್‌ 2-12)

ತೀರಿದ ಸೇಡು!

ದ.ಆಫ್ರಿಕಾ 2022ರ ಟಿ20 ವಿಶ್ವಕಪ್‌, 2023ರ ಏಕದಿನ ವಿಶ್ವಕಪ್‌ಗಳಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ ಸೋಲುಂಡಿತ್ತು. ಹೀಗಾಗಿ ಈ ಪಂದ್ಯ ಹರಿಣಗಳ ಪಾಲಿಗೆ ಸೇಡಿನ ಪಂದ್ಯವಾಗಿತ್ತು. ರೋಚಕ ಗೆಲುವಿನ ಮೂಲಕ, ದ.ಆಫ್ರಿಕಾ ನಿಟ್ಟುಸಿರು ಬಿಟ್ಟಿತು.