ಸಾರಾಂಶ
ನಾರ್ಥ್‌ಸೌಂಡ್: ಗುಂಪು ಹಂತದಲ್ಲಿ ಪಾಕಿಸ್ತಾನಕ್ಕೆ ಆಘಾತ ನೀಡಿದ್ದ ಅಮೆರಿಕ, ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿಯುವ ನಿರೀಕ್ಷೆ ಮೂಡಿಸಿತ್ತು. ಕಗಿಸೋ ರಬಾಡ ಸಹಾಸ ತೋರದೆ ಹೋಗಿದ್ದರೆ, ದ.ಆಫ್ರಿಕಾಕ್ಕೆ ಟೂರ್ನಿಯಲ್ಲಿ ಮೊದಲ ಸೋಲು ಎದುರಾಗುತ್ತಿತ್ತೇನೋ. 18 ರನ್‌ಗಳ ಗೆಲುವಿನ ಅಂತರ ದೊಡ್ಡದಾಗಿ ಕಂಡರೂ, ಹರಿಣ ಪಡೆಗೆ ಈ ಗೆಲುವು ನಿರೀಕ್ಷಿತ ಸಮಾಧಾನ ತಂದಂತೆ ಕಾಣುತ್ತಿಲ್ಲ.
ಮೊದಲು ಬ್ಯಾಟ್ ಮಾಡಿದ ದ.ಆಫ್ರಿಕಾ 20 ಓವರಲ್ಲಿ 4 ವಿಕೆಟ್‌ಗೆ 194 ರನ್ ಕಲೆಹಾಕಿತು. ಕ್ವಿಂಟನ್ ಡಿ ಕಾಕ್‌ರ ಸ್ಫೋಟಕ ಆಟ (40 ಎಸೆತದಲ್ಲಿ 74 ರನ್)ದ ನೆರವಿನಿಂದ ಮೊದಲ 10 ಓವರಲ್ಲಿ 1 ವಿಕೆಟ್ ನಷ್ಟಕ್ಕೆ 101 ರನ್ ಚಚ್ಚಿದರೂ, ಆ ಬಳಿಕ ರನ್ ಗಳಿಕೆಯಲ್ಲಿ ವೇಗ ಕಳೆದುಕೊಂಡಿತು. ಆದರೂ ಕೊನೆಯಲ್ಲಿ ಕ್ಲಾಸೆನ್‌ನ ಹೋರಾಟ ತಂಡವನ್ನು ಸ್ಪರ್ಧಾತ್ಮಕ ಮೊತ್ತ ತಲುಪಿಸಿತು.
ಅಮೆರಿಕಕ್ಕೆ ಸ್ಟೀವನ್ ಟೇಲರ್ ಉತ್ತಮ ಆರಂಭ ಒದಗಿಸಿದರು. 14 ಎಸೆತದಲ್ಲಿ 24 ರನ್ ಸಿಡಿಸಿದರು. ಆ್ಯಂಡ್ರಿಯೆಸ್ ಗೌಸ್‌ರಿಂದಲೂ ಉತ್ತಮ ಬೆಂಬಲ ದೊರೆಯಿತು. ಮೊದಲ 5 ಓವರಲ್ಲಿ 1 ವಿಕೆಟ್‌ಗೆ 51 ರನ್ ಗಳಿಸಿದ ಅಮೆರಿಕ, ಮುಂದಿನ 5 ಓವರಲ್ಲಿ ಕೇವಲ 22 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ತಂಡ ಒತ್ತಡಕ್ಕೆ ಸಿಲುಕಿದಂತೆ ಕಂಡುಬಂತು. ಏಕಾಂಗಿ ಹೋರಾಟ ಮುಂದುವರಿಸಿದ್ದ ಗೌಸ್‌ಗೆ ಹರ್ಮೀತ್ ಸಿಂಗ್ ಜೊತೆಯಾದರು. ಇವರಿಬ್ಬರ ಸ್ಫೋಟಕ ಆಟ ಅಮೆರಿಕದ ಪಾಳಯದಲ್ಲಿ ಜಯದ ಆಸೆ ಚಿಗುರಿಸಿತು.
ಕೊನೆಯ 3 ಓವರಲ್ಲಿ ಗೆಲ್ಲಲು 50 ರನ್ ಬೇಕಿದ್ದಾಗ, 18ನೇ ಓವರಲ್ಲಿ ಶಮ್ಸಿ 22 ರನ್ ಚಚ್ಚಿಸಿಕೊಂಡರು. ಅಮೆರಿಕಕ್ಕೆ 12 ಎಸೆತದಲ್ಲಿ 28 ರನ್ ಬೇಕಿತ್ತು. ಆದರೆ, ರಬಾಡ 19ನೇ ಓವರಲ್ಲಿ ಕೇವಲ 2 ರನ್ ನೀಡಿ, ಅಮೆರಿಕದ ಆಸೆಗೆ ತಣ್ಣೀರೆರೆಚಿದರು. ಕೊನೆಯ ಓವರಲ್ಲಿ 26 ರನ್ ಬೇಕಿದ್ದಾಗ ಸಹಜವಾಗಿಯೇ ಅಮೆರಿಕ ಒತ್ತಡಕ್ಕೆ ಸಿಲುಕಿ ಸೋಲಿಗೆ ಶರಣಾಯಿತು. ಗೌಸ್ 47 ಎಸೆತದಲ್ಲಿ ತಲಾ 5 ಬೌಂಡರಿ, ಸಿಕ್ಸರ್‌ನೊಂದಿಗೆ ಔಟಾಗದೆ 80 ರನ್ ಸಿಡಿಸಿ ಗಮನ ಸೆಳೆದರು. ಸ್ಕೋರ್: ದ.ಆಫ್ರಿಕಾ 20 ಓವರಲ್ಲಿ 194/4 (ಡಿ ಕಾಕ್ 74, ಮಾರ್ಕ್‌ರಮ್ 46, ಕ್ಲಾಸೆನ್ 36, ಸೌರಭ್ 2-21, ಹರ್ಮೀತ್ 2-24), ಅಮೆರಿಕ 20 ಓವರಲ್ಲಿ 176/6 (ಗೌಸ್ 80*, ಹರ್ಮೀತ್ 38, ರಬಾಡ 3-18) ಪಂದ್ಯಶ್ರೇಷ್ಠ: ಡಿ ಕಾಕ್